ನೇತ್ರದಾನ, ಅಂಗದಾನ ಮಾಡಿ ಜೀವ ಉಳಿಸಿ

| Published : Sep 04 2024, 01:49 AM IST

ಸಾರಾಂಶ

ಮಣ್ಣಲ್ಲಿ ಮಣ್ಣಾಗಿ, ಬೆಂಕಿಯಲ್ಲಿ ಬೂದಿಯಾಗಿ ಸುಟ್ಟು ವ್ಯರ್ಥವಾಗುವ ದೇಹದ ಅಂಗಾಂಗಗಳನ್ನು ದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಕೆಲಸ ಮಾಡಿರಿ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಮಣ್ಣಲ್ಲಿ ಮಣ್ಣಾಗಿ, ಬೆಂಕಿಯಲ್ಲಿ ಬೂದಿಯಾಗಿ ಸುಟ್ಟು ವ್ಯರ್ಥವಾಗುವ ದೇಹದ ಅಂಗಾಂಗಗಳನ್ನು ದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಕೆಲಸ ಮಾಡಿರಿ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದರು.

ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಚಿಕ್ಕಮಗಳೂರು ಇವರ ಸಹಯೋಗದಲ್ಲಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 39ನೇ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಡಾ. ರಾಜ್ ಕುಮಾರ್ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದವರು ಎಂದು ಸ್ಮರಿಸಿದರು. ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯ ಅಂಧರಿಗೆ ದೃಷ್ಠಿ ನೀಡುತ್ತದೆ. ಪ್ರತಿ ವರ್ಷ 22000 ಜನರಿಂದ ನೇತ್ರದಾನವಾಗುತ್ತಿದೆ. ಅಂದಾಜು 3.5 ಲಕ್ಷ ಜನರು ಕಾರ್ನಿಯ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿರುತ್ತಾರೆ ಎಂದರು.

ಕರ್ನಾಟಕದಲ್ಲಿ 32 ನೇತ್ರಬ್ಯಾಂಕುಗಳು ಸೇವೆ ಸಲ್ಲಿಸುತ್ತಿದ್ದು 7 ಸರ್ಕಾರಿ ಸ್ವಾಮ್ಯದಲ್ಲಿದೆ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು, ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ನೇತ್ರದಾನ ಮಾಡಬಹುದು. ವ್ಯಕ್ತಿಯ ಮರಣದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣಗೆ ಬೇಕಾಗುವ ಸಮಯ ಕೇವಲ 20 ನಿಮಿಷ ಎಂದು ಮಾಹಿತಿ ನೀಡಿದರು.

ಶಸ್ತ್ರ ಚಿಕಿತ್ಸಕರಾದ ಡಾ. ಸಂತೋಷ್ ಕುಮಾರ್, ಡಾ.ಮಹಮದ್ ಸಾಧಿಕ್, ಡಾ.ನಾಗರಾಜ್, ಡಾ.ಶ್ರೀನಿವಾಸ್, ಡಾ.ಭಾಗ್ಯಲಕ್ಷ್ಮಿ, ಡಾ.ಗೀತಾ, ಡಾ.ದೇವಕುಮಾರ್, ನೇತ್ರಾಧಿಕಾರಿ ಕು.ಅನು ಕೆಂಪರಂಗಯ್ಯ, ಲ್ಯಾಬ್ ಟೆಕ್ನಿಷಿಯನ್ ಓಂಕಾರಮೂರ್ತಿ, ಅಸ್ಪತ್ರೆಯ ಸಿಬ್ಭಂದಿಗಳು, ಹೊರರೋಗಿಗಳು, ಒಳರೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ. ಟಿ.ಎಂ. ದೇವರಾಜ್ ಅವರು ಆಂಗಾಂಗದಾನ, ನೇತ್ರದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.