ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಕ್ತದಾನದಂತಹ ಪವಿತ್ರ ಕಾರ್ಯದಿಂದ ಮಾತ್ರ ಮನುಷ್ಯರ ಜೀವ ಉಳಿಸಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ರೂಪ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ವಾಮಿ ವಿವೇಕಾನಂದ, ಶ್ರೀಬಾಲಗಂಗಾಧರನಾಥ ಸ್ವಾಮೀಜಿ, ಶ್ರೀಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಹಾಗೂ ದಿ.ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣವರ ನೆನಪು ಅಂಗವಾಗಿ ಓಂ ಶ್ರೀನಿಕೇತನ ಟ್ರಸ್ಟ್, ವಕೀಲರ ಸಂಘ, ಉದ್ಯೋಗದಾತ ಫೌಂಡೇಷನ್ ಇವರ ಸಹಯೋಗದಲ್ಲಿ ನಡೆದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದಿನ ನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿದೆ ಎಂದರು.18 ರಿಂದ 65 ವರ್ಷದ ನಡುವಿನ ಆರೋಗ್ಯವಂತರು ರಕ್ತದಾನ ಮಾಡಿ ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು. ಜೊತೆಗೆ ರಕ್ತದಾನ ಕುರಿತು ಬೇರೆಯವರಿಗೂ ರಕ್ತದಾನ ಮಾಡಲು ಜಾಗೃತಗೊಳಿಸಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹಾಗೂ ವಕೀಲ ಎಂ. ಪುಟ್ಟೇಗೌಡ ಮಾತನಾಡಿ, ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆ ಆಗಿದೆ. ಈ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಿ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸುವ ಕೆಲಸ ಮಾಡಬೇಕು. ಜೊತೆಗೆ ಇಂದಿನ ಯುವಕರು ರಕ್ತ ದಾನ ದಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಬೇಕು ಎಂದರು.ನ್ಯಾಯಾಧೀಶರಾದ ವಿಜಯಕುಮಾರ್, ಹನುಮಂತರಾಯಪ್ಪ ಬಿ.ಆರ್, ತಹಶೀಲ್ದಾರ್ ಪರುಶುರಾಮ್ ಸತ್ತಿಗೇರಿ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ತಾಪಂ ಇಒ ವೇಣು, ಉದ್ಯೋತದಾತ ಪೌಂಡೇಷನ್ ಮುಖ್ಯಸ್ಥ ರುಕ್ಮಾಂಗದ, ಶೇಷಾಂದ್ರಿ ಪುರಂ ಇಂಜಿನಿಯರ್ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ.ರಾಘವೇಂದ್ರ, ಮಂಡ್ಯ ಮತ್ತು ಮೈಸೂರು ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ರಕ್ತ ಶೇಖರಣೆ ಮಾಡಿಕೊಂಡರು.
ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆ ಅಧಿಕಾರಿಗಳು, ಪತ್ರಕರ್ತರು, ವಕೀಲರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.