ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಪ್ರಸನ್ನಮೂರ್ತಿ ಗುರುವಿನಪುರ ಅವರ ನಮ್ಮ ಕಾಡಿನ ಕತೆಗಳು [ನಮ್ಕಾಡನ ಕತೆಗಳು] ಓದಿದ ನಂತರ ಬಿಡದೇ ಕಾಡುತ್ತವೆ.ಇದು ಅವರ ಎರಡನೇ ಕಥಾ ಸಂಕಲನ. ಇದರಲ್ಲಿ ಒಟ್ಟು ಆರು ಕತೆಗಳಿವೆ. ಈಗಾಗಲೇ ಅವರು ಮೂರು ಕವನ ಸಂಕಲನ, ತೆಂಕಣಸೀಮೆಯ ಕತೆಗಳು ಕಥಾ ಸಂಕಲನ ಪ್ರಕಟಿಸಿದ್ದಾರೆ. ಇದೀಗ ನಮ್ಮ ಕಾಡಿನ ಕತೆಗಳು ಅವರ ಐದನೇ ಕೃತಿ ಹಾಗೂ ಎರಡನೇ ಕಥಾ ಸಂಕಲನ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿಯ ಅಜ್ಜಿಯ ಮನೆಯಲ್ಲಿ ಬಾಲ್ಯ ಕಳೆದಿರುವ ಪ್ರಸನ್ನಮೂರ್ತಿ ಅವರು ಆಗ ಕಂಡ ಗ್ರಾಮ್ಯ ಚಿತ್ರಗಳನ್ನು ತಮ್ಮ ನೆನಪಿನ ಶಕ್ತಿಯಿಂದಾಗಿ ಕಥನ ಕಲೆಯ ಮೂಲಕ ಓದುಗರಿಗೆ ಕಟ್ಟಿಕೊಟ್ಟಿರುವುದು ವಿಶೇಷ. ಚಾಮರಾಜನಗರ ಸೀಮೆಯ ಕನ್ನಡ ಆಡುಭಾಷೆಯೇ ಕತೆಗಳ ಹೈಲೈಟ್ಸ್. ಎಲ್ಲವೂ ದೀರ್ಘ ಕತೆಗಳೇ. ತಮ್ಮ ಎರಡನೇ ಕಥಾ ಸಂಕಲನದಲ್ಲಿಯೇ ಭರವಸೆಯ ಕತೆಗಾರರಾಗಿ ಹೊರಹೊಮ್ಮಿದ್ದಾರೆ.''''ಈರಭದ್ರ'''' ಬಸ್ಸಿನಲ್ಲಿ ಎರಡು ಕುರಿಗಳನ್ನು ಹಾಕಿಕೊಂಡು ಹೋಗುತ್ತಿದ್ದ ಸಿದ್ದೇಗೌಡನಿಗೆ ಕಂಡಕ್ಟರ್ ಶ್ರೀಪತಿ ಜಾನುವಾರು ಸಾಗಾಣಿಕೆ ಲಗೇಜು ಹಾಕಿದಾಗ, ''''ಮಾತ್ ಬರದಿರೋ ಮೂಕ್ ಜೀವಗಳಗೂ ದುಡ್ ಹಾಕ್ತಿದ್ದಯಲ್ಲ ನೀನು ಮನುಷ್ಯನಾ? ವಸಿ ಮಟ್ಟಗಾ ಬುದ್ಧಿ ಕಲಿ!. ಮುಂದುನ ಜಲ್ಮದಲ್ಲಿ ಆ ದ್ಯಾವರು ನಿನ್ನುವಿ ಮೂಕ್ ಪ್ರಾಣಿ ಮಾಡ್ಭುಡ್ತವನಾ'''' ಎಂದು ದಬಾಯಿಸುತ್ತಾನೆ. ಈ ರೀತಿಯ ಚಾಮರಾಜನಗರ ಭಾಗದ ಕನ್ನಡ ಬಳಸಿ, ಆ ಭಾಗದಲ್ಲಿ ನಡೆದಿರುವ ನೈಜ ಘಟನೆಗಳನ್ನು ಎಳೆಯಾಗಿಟ್ಟುಕೊಂಡು ಕತೆಗಳನ್ನು ಕಟ್ಟಿಕೊಟ್ಟಿರುವುದು ಇದಕ್ಕೆ ಕಾರಣ. ಪ್ರತಿ ಕತೆಯಲ್ಲೂ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಜೊತೆಗೆ ಕತೆಗಳನ್ನು ಓದುತ್ತಾ ಹೋದಂತೆ ಕುತೂಹಲ ಕೆರಳಿಸುತ್ತವೆ. ಹೀಗಾಗಬಹುದು ಎಂದು ಓದುಗ ಊಹಿಸುವಂತಿಲ್ಲ. ಸಿನಿಮಾಗಳಲ್ಲಿ ಅನಿರೀಕ್ಷಿತ ತಿರುವು ಇರುವಂತೆ ಇವರ ಕತೆಗಳಲ್ಲೂ ಕೆಲವೊಂದು ಅನಿರೀಕ್ಷಿತ ತಿರುವುಗಳು!. ಇದರಿಂದ ಕತೆಗಳು ಗಮನ ಸೆಳೆಯುತ್ತವೆ.
ಅವ್ವ- ಚೆಲುವಿ ಎಂಬ ತ್ಯಾಗಮಯಿ ಹೆಣ್ಣೊಬ್ಬಳ ಕುರಿತ ಕತೆ. ಅವಳ ಬದುಕೆ ನಿಸ್ವಾರ್ಥಮಯವಾದದ್ದು ಎನ್ನುವುದನ್ನು ತೋರಿಸುತ್ತದೆ.ಮೋಡಿ- ಮಾಟ, ಮಂತ್ರ ಕುರಿತಾದ ಕತೆ.
ಮಹಾಮಜ್ಜನ- ಕ್ಷೌರಿಕ ಬೊಮ್ಮನ ಬಳಿ ತಲೆ ಕೂದಲು ಕತ್ತರಿಸಿಕೊಂಡ ನಂತರ ರಮೇಶ್ ಎಂಬ ಬಾಲಕನಿಗೆ ಅಜ್ಜಿ ಮಾಡಿಸುವ ಮಹಾಮಜ್ಜನ ಈ ಕತೆಯ ತಿರುಳು.ಬುಡುಬುಡಕೆ ಕತೆಯು ಯುವಕನೊಬ್ಬ ತನ್ನ ಪ್ರೇಮ ಪುರಾಣ ಗೊತ್ತಾಗದಂತೆ ಗ್ರಾಮಸ್ಥರನ್ನು ವಂಚಿಸುತ್ತಿದ್ದ ಪ್ರಸಂಗವನ್ನು ವಿವರಿಸುತ್ತದೆ. ಇದೊಂದು ಪತ್ತೆದಾರಿ ಕಥೆ,.
ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸುತ್ತದೆ. ಅದೇ ರೀತಿ ಪೋಸ್ಟಾಫೀಸು ಹಳ್ಳಿಗಳಲ್ಲಿ ಯಾವ ರೀತಿ ಬಳಕೆಯಾಗುತ್ತವೆ, ಪತ್ರಗಳನ್ನು ಅಕ್ಷರಸ್ಥರ ಬಳಿ ಬಳಸುತ್ತಿದ್ದುದನ್ನು ತಿಳಿಸುತ್ತದೆ.ಪ್ರಸನ್ನಮೂರ್ತಿ ಗುರುವಿನಪುರ ಅವರು ಕತೆ ಹೇಳುವ ಶೈಲಿ, ಬಳಸಿರುವ ಭಾಷೆ ಆಕರ್ಷಕ. ಈ ಕಥಾ ಸಂಕಲನವನ್ನು ಸಂವಹನ ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಡಿ.ಎನ್. ಲೋಕಪ್ಪ, ಮೊ. 99026 39593, ಪ್ರಸನ್ನಮೂರ್ತಿ ಗುರುವಿನಪುರ, ಮೊ. 89711 55548 ಸಂಪರ್ಕಿಸಬಹುದು.