ಸಾವು ಬದುಕಿನ ನಡುವೆ ಹೋರಾಡುವ ವ್ಯಕ್ತಿಯ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರ ಮೂಲಕ ಸಾಮಾಜಿಕ ಜವಾಬ್ದಾರಿ ಹೊರಬೇಕು ಎಂದು ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಕೆ.ಜಿ. ಶಶಿಧರ್ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ಸಾವು ಬದುಕಿನ ನಡುವೆ ಹೋರಾಡುವ ವ್ಯಕ್ತಿಯ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರ ಮೂಲಕ ಸಾಮಾಜಿಕ ಜವಾಬ್ದಾರಿ ಹೊರಬೇಕು ಎಂದು ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಕೆ.ಜಿ. ಶಶಿಧರ್ ಹೇಳಿದರು.ಗುರುವಾರ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ತಾಲೂಕು ಪಂಚಾಯಿತಿ ಸೊರಬ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊರಬ, ಸಾರ್ವಜನಿಕ ಆಸ್ಪತ್ರೆ ಸೊರಬ, ರಕ್ತನಿಧಿ ವಿಭಾಗ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ತಾಲೂಕು ಘಟಕ ಸೊರಬ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನೌಕರರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸ್ಥಿರ ಸಮಾಜದ ನಿರ್ಮಾಣದ ಜೊತೆಗೆ ಜನರ ಸರ್ವಾಂಗೀಣ ಅಭಿವದ್ಧಿಗೆ ಆರೋಗ್ಯ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಹಲವು ರೋಗಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಅವುಗಳನ್ನು ಗುಣಪಡಿಸಬಹುದು. ಜನರು ಮತ್ತು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದರು.ಸರ್ಕಾರಿ ನೌಕರರು ಸಾಕಷ್ಟು ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕರ್ತವ್ಯದ ಸಂದರ್ಭದಲ್ಲಿ ಬಹಳಷ್ಟು ಜನ ಸರ್ಕಾರಿ ನೌಕರರು ಜೀವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಮೇಲಾಧಿಕಾರಿಗಳು ನೌಕರರನ್ನು ಪ್ರಗತಿಗೋಸ್ಕರ ಬಳಸಿಕೊಳ್ಳದೆ ಭವಿಷ್ಯದ ದೃಷ್ಟಿಯಿಂದ ಅವರ ಕುಟುಂಬದ ಹಿತಕಾಯುವಲ್ಲಿ ಸಹಕರಿಸಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ನಿಗದಿತ ಸಮಯಕ್ಕೆ ವೈದ್ಯರ ಬಳಿ ತೆರಳಿ ತಪಾಸಾಣೆ ಮಾಡಿಸಿಕೊಳ್ಳುವುದರ ಜೊತೆಗೆ ಉತ್ತಮ ಸಲಹೆ ಸಹಕಾರ ಪಡೆಯಬೇಕು. ರಕ್ತ ನೀಡಲು ಯಾವುದೇ ಜಾತಿ ಮತದ ಭೇದವಿಲ್ಲ. ಪ್ರತಿಯೊಬ್ಬರು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿ ದಾನ ಮಾಡುವುದು ಪುಣ್ಯದ ಕಾರ್ಯವಾಗಿದೆ. ಈ ದಿಶೆಯಲ್ಲಿ ಪಂಚಾಯತ್‌ರಾಜ್ ಇಲಾಖೆಯವರು ನೌಕರರಿಗೆ ಏರ್ಪಡಿಸಿರುವ ರಕ್ತದಾನ ಶಿಬಿರ ಅತಿ ಮಹತ್ವದಿಂದ ಕೂಡಿದೆ ಎಂದರು.ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತುರ್ತಾಗಿ ಅಗತ್ಯವಾಗಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ. ಇದನ್ನರಿತು ಸಮಾಜದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು. ರಕ್ತದಾನ ಮಾಡಿದರೆ ತಮ್ಮ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೊಸ ರಕ್ತ ಉತ್ಪತ್ತಿಯಾಗಲಿದೆ ಪ್ರತಿಯೊಬ್ಬರೂ ಪ್ರಮುಖವಾಗಿ ಯುವ ಜನಾಂಗ ವರ್ಷಕ್ಕೆ ೩-೪ಬಾರಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಡಾ. ಪ್ರಭು ಕೆ. ಸಾಹುಕಾರ್, ಡಾ. ರಾಘವೇಂದ್ರ, ಡಾ. ಮಹೇಶ್, ಪರಮೇಶ್ವರ, ರಿಯಾಜ್ ಅಹ್ಮದ್. ರಾಘವೇಂದ್ರ, ಚಿದಾನಂದ, ಸೀನಪ್ಪ, ಸಂದೀಪ್, ಶ್ರೀಕಾಂತ್, ಸುಬ್ರಾಯ್, ಮಂಜುನಾಥ್, ಆನಂದಪ್ಪ, ಬಲೀಂದ್ರಪ್ಪ, ಸಂತೋಷ್ ಇದ್ದರು.