ಸಾರಾಂಶ
ಕಾರಟಗಿ: ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ದಾಸೋಹಕ್ಕೆ ತಾಲೂಕಿನ ನಾಗನಕಲ್ ಗ್ರಾಮದ ಭಕ್ತರು ೧೫ ಸಾವಿರ ರೊಟ್ಟಿ, ಬೆಲ್ಲ, ಅಕ್ಕಿ, ೫೦೦ ತೆಂಗಿನಕಾಯಿ ಜೊತೆಗೆ ₹೨೫ ಸಾವಿರ ನಗದು ದೇಣಿಗೆ ರವಾನಿಸಿದರು.ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ರೊಟ್ಟಿ, ಅಕ್ಕಿ ಸೇರಿ ದವಸ ಧಾನ್ಯ ತುಂಬಿದ ವಾಹನಗಳಿಗೆ ಪೂಜೆ ಸಲ್ಲಿಸಿ ಡೊಳ್ಳು ಬಾರಿಸುತ್ತ ಮೆರವಣಿಗೆ ನಡೆಸಿ ವಾಹನಗಳನ್ನು ಕೊಪ್ಪಳದ ಗವಿಮಠಕ್ಕೆ ಕಳುಹಿಸಿಕೊಟ್ಟರು.ಈ ವೇಳೆ ಗ್ರಾಮದ ವೀರಭದ್ರಗೌಡ ಮಾತನಾಡಿ, ಕೊಪ್ಪಳ ಗವಿಸಿದ್ದೇಶ್ವರ ಮಠದ ಜಾತ್ರೆ ನಾಡಿಗೆ ಹೆಸರಾಗಿದೆ. ಶ್ರೀಮಠ ಅನ್ನ, ಅಕ್ಷರ, ಆರೋಗ್ಯ ತ್ರಿವಿಧ ದಾಸೋಹ ನೀಡುವುದಕ್ಕೆ ಪ್ರಸಿದ್ಧ. ಜ್ಞಾನ ದಾಸೋಹ ಮತ್ತು ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರವಾಗಿರುವ ಈ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಈ ಭಾಗದ ಶಿಕ್ಷಣ ಕ್ಷೇತ್ರದ ದಿಕ್ಕು ದೆಸೆಯನ್ನು ಬದಲಿಸುತ್ತಿದೆ. ಆ ಕಾರಣಕ್ಕೆ ಇಂಥ ಮಠವೊಂದು ನಮ್ಮ ಜಿಲ್ಲೆಯಲ್ಲಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.ದಕ್ಷಿಣ ಭಾರತದ ಕುಂಭಮೇಳವೆಂದೇ ದೇಶಾದ್ಯಂತ ಸುಪ್ರಸಿದ್ಧವಾಗಿರುವ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಭಕ್ತಗಣಕ್ಕೆ ನಡೆಯುವ ದಾಸೋಹಕ್ಕೆ ಭತ್ತದ ಕಣಜವಾಗಿರುವ ತಾಲೂಕಿನ ನಾಗನಕಲ್ ಗ್ರಾಮದಿಂದ ಶ್ರೀಮಠಕ್ಕೆ ದವಸ ದಾನ್ಯ ರವಾನಿಸಲು ಸಂತಸವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಈ ವೇಳೆ ಭೀಮನಗೌಡ, ಪಂಪಾಪತಿ, ಶಿವಬಸನಗೌಡ, ಮಲ್ಲಿಕಾರ್ಜುನ ಹೂಗಾರ, ಹುಸೇನಪ್ಪ, ಭೋಗಪ್ಪ ನವಲಿ, ಚಂದ್ರಶೇಖರ,ಪರುಶರಾಮ್, ವೀರೇಶ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಹುಲಿಗೇಶ್ ಭೋವಿ, ಮರಿಬಸವನಗೌಡ, ಶರಣಪ್ಪ ಹೆಚ್, ವೀರೇಶ ಗುಂಜಳ್ಳಿ, ಹುಸೇನಸಾಬ್, ಮಂಜುನಾಥ್ ಹಿರೇಮಠ, ತಿಮ್ಮಣ್ಣ ನಾಯಕ್, ರಾಜಾಸಾಬ್ ಮರಳಿ, ಜಗದೀಶ್ ಹುಲಿಹೈದರ್ ಇನ್ನಿತರರು ಇದ್ದರು.