ಜಯವಿಭವ ಶ್ರೀಗಳಿಂದ ದೇಶ ರಕ್ಷಣೆಗೆ ಬಂಗಾರದ ಕಿರೀಟ ದೇಣಿಗೆ

| Published : May 20 2024, 01:31 AM IST

ಸಾರಾಂಶ

ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದಲ್ಲಿ ಲಿಂಗೈಕ್ಯ ಜಗದ್ಗುರು ಜಯವಿಭವ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.

ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ಬಿ.ರಾಜಶೇಖರಪ್ಪ ರಿಂದ ಹಳೆಯ ನೆನಪು

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚೀನಾದವರು ಭಾರತದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ದೇಶ ರಕ್ಷಣೆಯ ಕಾರ್ಯಕ್ಕೆ ಬಂಗಾರದ ಕಿರೀಟ, ದಪ್ಪನೆಯ ಉಂಗುರ ಸೇರಿ ಸಹಸ್ರಾರು ರು. ಕಾಣಿಕೆ ಅರ್ಪಿಸುವ ಮೂಲಕ ಲಿಂಗೈಕ್ಯ ಜಯವಿಭವ ಸ್ವಾಮಿಗಳು ದೇಶ ಭಕ್ತಿ ಮೆರೆದು ಮಾದರಿಯಾಗಿದ್ದಾರೆ ಎಂದು ಹಿರಿಯ ವಿದ್ವಾಂಸ ಡಾ.ಬಿ ರಾಜಶೇಖರಪ್ಪ ನೆನಪಿಸಿಕೊಂಡರು.

ಇಲ್ಲಿನ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಲಿಂಗೈಕ್ಯ ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ಜಯದೇವ ಸ್ವಾಮಿಗಳ ಉತ್ತರಾಧಿಕಾರಿಯಾಗಿ ಬಂದ ಶ್ರೀ ಜಯವಿಭವ ಸ್ವಾಮಿಗಳ, ಮೂಲ ಹೆಸರು ಶಿವಲಿಂಗ ಮಹಾದೇವರು. ಕಾಶಿಗೆ ಉನ್ನತ ಅಭ್ಯಾಸಕ್ಕೆ ತೆರಳಿ ವೇದೋಪನಿಷತ್ತು, ಆಗಮ ಕಲಿತರು. ಚಿತ್ರದುರ್ಗಕ್ಕೆ ಬಂದ ನಂತರ ಜಯದೇವ ಸ್ವಾಮಿಗಳು ಅವರನ್ನು ಜಯವಿಭವ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ.

1949ರಲ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ, 1956ರಲ್ಲಿ ಜಯದೇವ ಜಗದ್ಗುರುಗಳು ಲಿಂಗೈಕ್ಯರಾದ ನಂತರ ಅಧಿಕಾರ ವಹಿಸಿಕೊಂಡರು. ಶ್ರೀಗಳು ವೇದ, ವೇದಾಂತ, ಸಕಲ ಶಾಸ್ತ್ರ ಅಭ್ಯಾಸ ಮಾಡಿ, ಸಂಯಮಶೀಲರಾಗಿದ್ದರು. ಷಟ್‍ಸ್ಥಲ ಸಿದ್ಧಾಂತವನ್ನು ಚೆನ್ನಾಗಿ ತಿಳಿದುಕೊಂಡು, 6 ಭಾಷೆಗಳಾದ ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾಗಿ ಭಾಷಾ ಪಾಂಡಿತ್ಯ ಹೊಂದಿದ್ದರು.

ಸಸ್ಯ ಪ್ರೇಮಿಗಳಾಗಿದ್ದ ಶ್ರೀಗಳು, ಮಠಪ್ಪ ಪಕ್ಕ ಕಲ್ಪವೃಕ್ಷವನ್ನು ನಿರ್ಮಿಸಿದ್ದರು. ಶ್ರೀಗಳು ಸದಾ ಧರ್ಮ, ಸಮಾಜದ ಅಭಿವೃದ್ಧಿ ಕರಿತು ಚಿಂತಿಸುತ್ತಿದ್ದರು. ಅನಾರೋಗ್ಯದಿಂದ ಶ್ರೀಮಠದಲ್ಲಿ ಲಿಂಗೈಕ್ಯರಾದರು. 1964ರಲ್ಲಿ ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ, ಶ್ರೀಮಠದ ಮುಂದಿನ ಜಗದ್ಗುರುಗಳನ್ನಾಗಿ ಮಲ್ಲಿಕಾರ್ಜುನ ಶ್ರೀಗಳ ಹೆಸರನ್ನು ಬರೆದಿಡುತ್ತಾರೆ. ಶ್ರೀಮಠದ ಆಡಳಿತ ನೋಡಿಕೊಂಡರೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸಗಳನ್ನು ಶ್ರೀಗಳು ಮಾಡಿದರು ಎಂದು ರಾಜಶೇಖರಪ್ಪ ಹೇಳಿದರು.

ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸ ಮಾತನಾಡಿ, ನಾವು ಮಾಡುವ ಕೆಲಸ ಮಾತನಾಡಬೇಕೆ ವಿನಹ, ನಾವು ಮಾತನಾಡಬಾರದು ಎಂದು ತಿಳಿದ ಶ್ರೀಗಳು, ಚಿತ್ರದುರ್ಗದಲ್ಲಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ನಿರ್ಮಿಸಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್. ಅಕ್ಕಮಹಾದೇವಿ ಸಮಾಜಕ್ಕೆ ಜಾಗ ನೀಡಿ ಕಟ್ಟಡ ನಿರ್ಮಿಸಲು ಧನಸಹಾಯ ಒದಗಿಸಿದ್ದಾರೆ. ಅಲ್ಲದೆ ಹೊಳಲ್ಕೆರೆ ರಸ್ತೆಯ ವೀರಶೈವ ಸಮಾಜದ ವಾಣಿಜ್ಯ ಸಂಕೀರ್ಣವನ್ನು ಶ್ರೀಗಳು ಲೋಕಾರ್ಪಣೆ ಮಾಡುವ ಮೂಲಕ ಹಲವಾರು ಸಮಾಜ ಕಾರ್ಯ ಶ್ರೀಗಳು ಮಾಡಿದ್ದಾರೆಂದು ಸ್ಮರಿಸಿದರು.

ಎಸ್.ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು , ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿದರು. ಇದಕ್ಕೂ ಮುನ್ನ ಶ್ರೀಗಳ ಸ್ಮರಣೆ ಅಂಗವಾಗಿ ಮುಂಜಾನೆ ಕರ್ತೃಗದ್ದುಗೆಯಲ್ಲಿ ವಚನಾಭಿಷೇಕ ಜರುಗಿತು, ನಂತರ ಶ್ರೀ ಜಗದ್ಗುರು ಜಯವಿಭವ ಮಹಾಸ್ವಾಮಿಗಳ ಕಲ್ಪವೃಕ್ಷ ವನದ ಮಹಾದ್ವಾರವನ್ನು ಜಯದೇವ ವಿದ್ಯಾರ್ಥಿನಿಲಯದ ಮಾಜಿ ವ್ಯವಸ್ಥಾಪಕ ಹಾಗು ಶ್ರೀಮಠದ ಏಜೆಂಟರಾಗಿ ಸೇವೆ ಸಲ್ಲಿಸಿದ ಎಸ್.ಮಲ್ಲಯ್ಯ ಉದ್ಘಾಟಿಸಿದರು. ಈ ವೇಳೆ ಸರ್ದಾರ್ ಸೇವಾಲಾಲ್ ಸ್ವಾಮಿ, ತಿಪ್ಪೇರುದ್ರ ಸ್ವಾಮಿಗಳು, ಶರಣೆ ಅಕ್ಕನಾಗಮ್ಮ ತಾಯಿ, ಸುರೇಶ್‍ಬಾಬು, ಕೆಇಬಿ ಷಣ್ಮುಖಪ್ಪ, ಎಸ್.ಮಲ್ಲಯ್ಯ, ಎಸ್.ಪರಮೇಶ್, ಗುತ್ತಿನಾಡು ಪ್ರಕಾಶ್, ಕೆ.ಎಂ.ವೀರೇಶ್ ಇದ್ದರು.