ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಬೀಜಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರ ಉಪಯೋಗಕ್ಕಾಗಿ, ಉಡುಪಿ ಯಕ್ಷಗಾನ ಕಲಾರಂಗವು ವಿದ್ಯಾಪೋಷಕ್‌ನ ವಿಂಶತಿಯ ನೆನಪಿನಲ್ಲಿ ೨.೫0 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಗಳಿಸಿದ ಈ ಶಾಲೆ ಅಭಿನಂದನಾರ್ಹವಾದುದು. ಈ ಶಾಲೆಯ ಮುಖ್ಯ ಬೇಡಿಕೆಯಾದ ಸಭಾಂಗಣ ನಿರ್ಮಾಣವು ತನ್ನ ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್, ಗ್ರಾಮೀಣ ಪ್ರದೇಶದ ಬಡ ಮಕ್ಕಳೇ ತುಂಬಿದ ಈ ಪ್ರೌಢಶಾಲೆಯ ಅಗತ್ಯತೆಗಳನ್ನು ನಮ್ಮ ಫೌಂಡೇಶನ್ ಮೂಲಕ ಸಾಧ್ಯವಾದಷ್ಟು ನೆರವೇರಿಸಲು ಬದ್ಧನಾಗಿದ್ದೇನೆ. ಉಡುಪಿಯ ಯಕ್ಷಗಾನ ಕಲಾರಂಗದ ಸಮಾಜಮುಖಿಯ ಚಟುವಟಿಕೆಗಳು ಎಲ್ಲ ಸಂಘಟನೆಗಳಿಗೂ ಆದರ್ಶಪ್ರಾಯವಾಗಿದೆ ಎಂದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮಾತನಾಡಿ, ಶಾಲೆಯ ಅಗತ್ಯವನ್ನು ಆಡಳಿತ ಮಂಡಳಿಗೆ, ಶಾಸಕರಿಗೆ ಮನವಿ ಮಾಡುವ ಮುಖ್ಯಶಿಕ್ಷಕರು ಸಾಮಾನ್ಯ. ಆದರೆ ಇಲ್ಲಿ ಮುಖ್ಯಶಿಕ್ಷಕಿ ವಿನೋದ ಎಂ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇದನ್ನು ನಿರ್ಮಿಸಿ ಆ ಗೌರವವನ್ನು ಕಲಾರಂಗಕ್ಕೆ ಅರ್ಪಿಸಿದ್ದಾರೆ. ಸಂಸ್ಥೆ ಅವರಿಗೆ ಋಣಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಶಿಕ್ಷಣ ತರಬೇತಿಯನ್ನೂ ಉದ್ಘಾಟಿಸಲಾಯಿತು.ವೇದಿಕೆಯಲ್ಲಿ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಶಾಲಾ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಶೇಷಗಿರಿ ಗೋಟ, ಅಧ್ಯಕ್ಷ ಶೇಖರ ಚಾತ್ರಬೆಟ್ಟು, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಟಿ. ನಾಯಕ್, ದಾನಿ ಮಂಜುನಾಥ ರಾವ್, ನಿವೃತ್ತ ಶಿಕ್ಷಕ ಯು.ಎಸ್.ರಾಜಗೋಪಾಲ ಆಚಾರ್ಯ, ಯಕ್ಷಗಾನ ಕಲಾರಂಗದ ಸದಸ್ಯರಾದ ವಿ.ಜಿ.ಶೆಟ್ಟಿ, ನಾರಾಯಣ ಎಂ. ಹೆಗಡೆ, ಯು.ಅನಂತರಾಜ ಉಪಾಧ್ಯ, ದಿನೇಶ ಪಿ. ಪೂಜಾರಿ, ಪ್ರಸಾದ್ ರಾವ್, ಯಕ್ಷಗುರು ನವೀನ್ ಕೋಟ ಹಾಗೂ ಶಾಲಾ ಶಿಕ್ಷಕರು ಮತ್ತು ರಕ್ಷಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಎಂ.ವಿನೋದ ಸ್ವಾಗತಿಸಿದರು.