ಡೋಣಿ ನದಿ ಪ್ರವಾಹ ತಡೆ: ಕ್ರಮಕ್ಕೆ ಸೂಚನೆ

| Published : Oct 08 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿಯಿಂದ ಉಂಟಾಗುವ ಪ್ರವಾಹವನ್ನು ತಡೆಯಲು ತಾತ್ಕಾಲಿಕವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸೂಕ್ತ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಡೋಣಿ ನದಿಯಿಂದ ಉಂಟಾಗುವ ಪ್ರವಾಹವನ್ನು ತಡೆಯಲು ತಾತ್ಕಾಲಿಕವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸೂಕ್ತ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪ್ರವಾಹ ನಿಯಂತ್ರಣ ಯೋಜನೆ ರೂಪಿಸುವ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗಳಲ್ಲಿ ಹೂಳು ತುಂಬಿಕೊಂಡು ಸೇತುವೆಯ ಎತ್ತರ ಕಡಿಮೆಯಾಗಿದ್ದು, ಇದರಿಂದ ನೀರಿನ ಶೇಖರಣೆ ಸಾಧ್ಯವಾಗುತ್ತಿಲ್ಲ. ನದಿಯಲ್ಲಿ ಹರಿಯುವ ನೀರಿನ ಒತ್ತಡ ಹೆಚ್ಚಾಗಿ ನೀರು ತನ್ನ ಪಥ ಬದಲಿಸಿ ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದರು.ಇದರಿಂದ ಡೋಣಿ ನದಿಗೆ ಸೇರುವ ಕಾಲುವೆಗಳ ಪರಿಶೀಲನೆ ಹಾಗೂ ಡೋಣಿ ನದಿ ವ್ಯಾಪ್ತಿಯ ವಿವಿಧೆಡೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಇರುವ ಅವಕಾಶ ಮತ್ತು ಡೋಣಿ ನದಿಯಿಂದ ಬೇರೆ ಕಾಲುವೆ, ಕೆರೆ-ಕಟ್ಟೆಗಳಿಗೆ ನೀರನ್ನು ಹರಿಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಬೇಕು. ಡೋಣಿ ನದಿಯಲ್ಲಿ ತುಂಬಿರುವ ಹೂಳಿನ ಪ್ರಮಾಣದ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಡೋಣಿ ನದಿ ಪ್ರವಾಹ ತಡೆ ಕುರಿತು ಸುದೀರ್ಘ ಎರಡು ಗಂಟೆಗಳ ಕಾಲ ರೈತರು, ಜಲಬಿರಾದಾರಿ ಸಂಘಟನೆಯವರು, ವಿವಿಧ ಅಧಿಕಾರಿಗಳೊಂದಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಯಿತು. ಡೋಣಿ ನದಿಯಲ್ಲಿ ಪ್ರವಾಹ ಉಂಟಾಗುವ ವಿವಿಧ ಕಾರಣಗಳ ಕುರಿತು ಕೆಬಿಜೆಎನ್‌ಎಲ್ ಉಪಮುಖ್ಯ ಅಭಿಯಂತರ ಸುಧೀರ ಸಜ್ಜನ ಅವರು ಪಿಪಿಟಿ ಮೂಲಕ ಸಮಗ್ರ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕೆಬಿಜೆಎನ್‌ಎಲ್ ನಾರಾಯಣಪುರ ಅಧೀಕ್ಷಕ ಅಭಿಯಂತರ ಮಂಜುನಾಥ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಲ್.ರೂಪಾ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಪಿಆರ್‌ಇಡಿ ಕಾರ್ಯನಿರ್ವಾಹಕ ಅಭಿಯಂತರ ನಬಿಲಾಲ ಗಬಸಾವಳಗಿ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಪಂ ಇಒಗಳು ಉಪಸ್ಥಿತರಿದ್ದರು.

------------

ಬಾಕ್ಸ್‌.......

ಪ್ರವಾಹ ತಡೆಗೆ ಕ್ರಮಗಳೇನು..?

ಡೋಣಿ ನದಿಯಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯದೇ ಒಂದೇ ಕಡೆ ನೀರು ಜಮಾವಣೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುವ ಕುರಿತು ರೈತರಿಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು. ಹರನಾಳ, ಸಾರವಾಡ, ಎನ್.ಎಚ್.೨೧೮ ಹೊನಗನಹಳ್ಳಿ, ಹಿಟ್ನಳ್ಳಿ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್‌ಗಳ ಪ್ರದೇಶದಲ್ಲಿ ಸರ್ವೇ ಕಾರ್ಯ ಕೈಗೊಳ್ಳಬೇಕು. ಸರ್ವೇ ಕಾರ್ಯ ಪೂರ್ಣಗೊಳಿಸಿದ ನಂತರ ಅವಶ್ಯಕತೆ ಇದ್ದಲ್ಲಿ ಈ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ೧೫೦ ಮೀ.ಹೂಳು ತೆಗೆಯುವುದು, ಗಿಡಗಂಟಿಗಳನ್ನು ತೆರವುಗೊಳಿಸುವ ಕುರಿತಂತೆ ತಗಲುವ ವೆಚ್ಚ ಸೇರಿದಂತೆ ಮುಂಚಿತವಾಗಿಯೇ ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. ಯಾವುದೇ ಸಮಸ್ಯೆ ಎದುರಾದರೂ ಕೈಗೊಳ್ಳಬಹುದಾದ ಪರಿಹಾರ ಕುರಿತು ಮುಂಚಿತವಾಗಿಯೇ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.