ಡೋಣಿ ಗ್ರಾಮ ಬೆಳೆವಿಮೆಯ ಅಕ್ರಮದ ಕೇಂದ್ರ: ವೆಂಕನಗೌಡ ಗೋವಿಂದಗೌಡ್ರ

| Published : Sep 16 2025, 12:04 AM IST

ಸಾರಾಂಶ

ಬೆಳೆವಿಮೆ ಹೆಸರಿನಲ್ಲಿ ರೈತರನ್ನು ಸಾಕಷ್ಟು ವಂಚಿಸಲಾಗುತ್ತಿದ್ದು, ಅದನ್ನು ನಡೆಸುವ ಹಲವಾರು ಏಜೆಂಟರು ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಆರೋಪಿಸಿದರು.

ಗದಗ: ಆನ್‌ಲೈನ್ ವಂಚನೆಗೆ ಹೆಸರಾಗಿರುವ ಜಾರ್ಖಂಡ ರಾಜ್ಯದ ಜಮತಾರ ಗ್ರಾಮದಂತೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಬೆಳೆವಿಮೆ ಅಕ್ರಮಕ್ಕೆ ಹೆಸರುವಾಸಿಯಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆವಿಮೆ ಹೆಸರಿನಲ್ಲಿ ರೈತರನ್ನು ಸಾಕಷ್ಟು ವಂಚಿಸುತ್ತಿದ್ದು, ಅದನ್ನು ನಡೆಸುವ ಹಲವಾರು ಏಜೆಂಟರು ಡೋಣಿ ಗ್ರಾಮದಲ್ಲಿದ್ದಾರೆ. ಬೆಳೆವಿಮೆ ಪಾವತಿ ಸಂದರ್ಭದಲ್ಲಿ ನಮೂದಿಸುವ ಬೆಳೆಗೂ, ಸಮೀಕ್ಷೆ ವೇಳೆಯ ಬೆಳೆಗಳಿಗೂ ಸಾಮ್ಯತೆಯೇ ಇರುವುದಿಲ್ಲ.

ಜಿಲ್ಲೆಯಲ್ಲಿ ಒರಿಯಂಟಲ್ ಇನ್ಶೂರೆನ್ಸ್ ಕಂಪನಿಯ ಅಧಿಕಾರಿಗಳು, ದಲ್ಲಾಳಿಗಳು, ರೈತರ ಹೆಸರಿನಲ್ಲಿ ವಿಮೆ ಪಾವತಿಸಿ, ವಿಮೆ ಜಮೆಯಾದಾಗ ರೈತರಿಗೆ ಅರ್ಧ, ತಮಗೆ ಅರ್ಧ ಎಂದು ಪಾಲು ಮಾಡಿಕೊಳ್ಳುತ್ತಿದ್ದಾರೆ.

ಈ ರೀತಿ ಬೆಳೆವಿಮೆ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರು. ಲಪಾಟಿಸಿದ ಅನೇಕ ಜನ ಡೋಣಿ ಗ್ರಾಮದಲ್ಲಿದ್ದಾರೆ. ಹೀಗೆ ಕೆಲವೇ ವರ್ಷಗಳಲ್ಲಿ ಬಂದಿರುವ ಶ್ರೀಮಂತಿಗೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯಲ್ಲಿ ಬೆಳೆವಿಮೆಯಲ್ಲಿ ಒಟ್ಟು ₹150 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ. ಒರಿಯಂಟಲ್ ಇನ್ಶೂರೆನ್ಸ್ ಕಂಪನಿ ಅಧಿಕಾರಿಗಳು, ದಲ್ಲಾಳಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಈ ಬೆಳೆವಿಮೆ ಅಕ್ರಮದಲ್ಲಿ ಭಾಗಿಯಾಗಿರುವ ದಲ್ಲಾಳಿಗಳ ಹೆಸರು ಹಾಗೂ ಇನ್ನಿತರ ದಾಖಲೆಗಳ ಸಹಿತ ಸೆ. 16ರಂದು ನೇರವಾಗಿ ಉಪಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಫುಲ್ ಪುಣೇಕರ್, ಬಸವರಾಜ ಅಪ್ಪಣ್ಣವರ, ಯಲ್ಲಪ್ಪ ಬಡಿಗೇರ, ಮೌನೇಶ ಬಡಿಗೇರ, ಕುಮಾರಸ್ವಾಮಿ ಕಡದಳ್ಳಿಮಠ, ಸುನೀಲ ಭಾಂಡಗೆ, ಸೋನು ಮಡಿವಾಳರ ಇತರರು ಉಪಸ್ಥಿತರಿದ್ದರು.