ಹಾವೇರಿ ತಾಲೂಕು ಕರ್ಜಗಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆಗಳ ಮದುವೆ ನೆರವೇರಿಸಿದರು.
ಹಾವೇರಿ:ಉತ್ತಮ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.
ಗ್ರಾಮದಲ್ಲಿ ಕಾರ್ತಿಕ ಎಂಬ ಗಂಡು ಕತ್ತೆ ಹಾಗೂ ಕಸ್ತೂರಿ ಎಂಬ ಹೆಣ್ಣು ಕತ್ತೆಯ ವಿವಾಹವನ್ನು ಗ್ರಾಮಸ್ಥರು ಸಂಭ್ರಮದಿಂದ ನೆರವೇರಿಸಿದರು. ಗ್ರಾಮದ ಹಿರಿಯರು ನವಜೋಡಿಗೆ ಆಶೀರ್ವದಿಸಿ, ವರುಣ ದೇವನಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿದರು.ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ವಿವಿಧ ರೀತಿಯ ಧಾರ್ಮಿಕ ಆಚರಣೆಗಳು ಹಾಗೂ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಕಪ್ಪೆ ಮದುವೆ, ಕತ್ತೆ ಮದುವೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳ ಮೂಲಕ ಮಳೆ ಸುರಿಯಲಿ ಎಂದು ದೇವರಲ್ಲಿ ಮೊರೆ ಹೋಗಲಾಗುತ್ತಿದೆ. ಇದೇ ನಂಬಿಕೆಯ ಹಿನ್ನೆಲೆಯಲ್ಲಿ ಕರ್ಜಗಿ ಗ್ರಾಮಸ್ಥರು ಕತ್ತೆಗಳ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು.
ವರ ಕಾರ್ತಿಕನ ಪರವಾಗಿ ರಾಜು ಹಾಗೂ ಗೌರವ್ವ ದೋಣಿ ದಂಪತಿ ಮತ್ತು ವಧು ಕಸ್ತೂರಿ ಪರವಾಗಿ ಉಮೇಶ ಹಾಗೂ ಸುಮಿತ್ರಾ ಉದಗಟ್ಟಿ ದಂಪತಿ ಪಾಲ್ಗೊಂಡು ವಿವಾಹದ ಸಂಪ್ರದಾಯಗಳನ್ನು ನೆರವೇರಿಸಿದರು. ಬಳಿಕ ಡೊಳ್ಳು, ಭಜಂತ್ರಿ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಮದುವೆಗೆ ಆಗಮಿಸಿದ್ದ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಜಯಣ್ಣ ಶೆಟ್ಟರ, ಪರಮೇಶ ಯತ್ನಳ್ಳಿ, ಉಮೇಶ ರೆಡ್ಡಿ (ಉದಗಟ್ಟಿ), ಪರಶುರಾಮ ಚವ್ಹಾಣ, ಪರಿಸರ ಪ್ರೇಮಿ ಪರಮೇಶ ಯತ್ನಳ್ಳಿ, ನೀಲಪ್ಪ ದೋಣಿ, ರಮೇಶ ಕುರವತ್ತಿ, ನಾಗರಾಜ ದೋಣಿ, ಗೋಪಾಲ ಚೌಹಾಣ, ಪ್ರಕಾಶ ಕಾಯಕದ, ಚಿನ್ನಮ್ಮ ಮಾನೆಗಾರ, ರತ್ನಮ್ಮ ಪೂಜಾರ, ರತ್ನಮ್ಮ ಸಾಳುಂಕೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.