ಕನ್ನಡಪ್ರಭ ವಾರ್ತೆ ಅಥಣಿ ಮುಂಗಾರು ಮಳೆ ಕೈಕೊಟ್ಟಾಗ, ರೈತರು ಮಳೆರಾಯನನ್ನು ಒಲಿಸಿಕೊಳ್ಳಲು ವಿವಿಧ ರೀತಿಯ ಸಂಪ್ರದಾಯಗಳನ್ನು ಆಚರಿಸುವುದುಂಟು. ಅದರಂತೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಮಳೆರಾಯನ ಕೃಪೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮತ್ತು ಗೊಂಬೆಗಳ ಮದುವೆ ಇಂತಹ ವಿಶಿಷ್ಟ ಸಂಪ್ರದಾಯಗಳನ್ನು ಮಾಡಿ ವರುಣನಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ಮುಂಗಾರು ಮಳೆ ಕೈಕೊಟ್ಟಾಗ, ರೈತರು ಮಳೆರಾಯನನ್ನು ಒಲಿಸಿಕೊಳ್ಳಲು ವಿವಿಧ ರೀತಿಯ ಸಂಪ್ರದಾಯಗಳನ್ನು ಆಚರಿಸುವುದುಂಟು. ಅದರಂತೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಮಳೆರಾಯನ ಕೃಪೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮತ್ತು ಗೊಂಬೆಗಳ ಮದುವೆ ಇಂತಹ ವಿಶಿಷ್ಟ ಸಂಪ್ರದಾಯಗಳನ್ನು ಮಾಡಿ ವರುಣನಿಗಾಗಿ ಪ್ರಾರ್ಥಿಸುತ್ತಿದ್ದಾರೆ.ಕೊಟ್ಟಲಗಿ ಗ್ರಾಮಸ್ಥರು ಹೆಣ್ಣು ಮತ್ತು ಗಂಡು ಕತ್ತೆಗಳನ್ನು ಆಯ್ಕೆ ಮಾಡಿ, ಸಾಂಪ್ರದಾಯಿಕ ಮದುವೆಯಂತೆ ವಿಧಿವಿಧಾನಗಳನ್ನು ನೆರವೇರಿಸಿದರು.
ಮನುಷ್ಯರ ಮದುವೆಯಂತೆ ಈ ಕತ್ತೆಗಳ ಮದುವೆಯಲ್ಲೂ ಎಲ್ಲ ಶಾಸ್ತ್ರಗಳನ್ನು ಸಂಭ್ರಮದಿಂದ ನಡೆಸಲಾಯಿತು. ಹೆಣ್ಣಿನ ಕಡೆ ಬೀಗರು, ಗಂಡಿನ ಕಡೆಯಿಂದ ಬೀಗರು ಆಗಮಿಸಿದ್ದರು. ಬುತ್ತಿ ರೊಟ್ಟಿ ತಂದು ಮಂಟಪದ ವ್ಯವಸ್ಥೆ ಮಾಡಿ, ಡೊಳ್ಳು ಮೇಳ, ಹಲಗೆ ವಾದನ ಜೊತೆಗೆ ಬಾಜಾ-ಭಜಂತ್ರಿಗಳ ಸದ್ದು ಹಾಗೂ ಮಂಗಲ ವಾದ್ಯಗಳ ಸದ್ದಿನೊಂದಿಗೆ ಅದ್ಧೂರಿಯಾಗಿ ಬೀಗರ ಎದುರುಗೊಳ್ಳುವಿಕೆ ನಂತರ ನೂಲು ಸುತ್ತುವುದು, ಮಂತ್ರಾಕ್ಷತೆ ಜೊತೆಗೆ ಕತ್ತೆಗಳಿಗೆ ಬಾಸಿಂಗ ಕಟ್ಟಿ ಮದುವೆ ಮಾಡಲಾಯಿತು.ಹೊತ್ತು ಬಂದಾಗ ಕತ್ತೆ ಕಾಲು ಹಿಡಿ: ಹೊತ್ತು ಬಂದಾಗ ಕತ್ತೆ ಕಾಲು ಹಿಡಿ ಎಂಬ ನಾಣ್ಣುಡಿ ಇಂದಿಗೂ ಪ್ರಚಲಿತದಲ್ಲಿದೆ. ಗ್ರಾಮದ ಸಿದ್ಧೇಶ್ವರ ದೇವಸ್ಥಾನದವರೆಗೆ ಗ್ರಾಮದಲ್ಲಿ ಪೂರ್ಣವಾಗಿ ಮದುವೆ ಮೆರವಣಿಗೆ ಜರುಗಿತ್ತು. ಸಿಹಿ ಊಟ ಗ್ರಾಮದ ಜನರಿಗೆ ಭೋಜನ ಏರ್ಪಡಿಸಲಾಗಿತ್ತು. ನಂತರ ಊರ ಗೌಡರಾದ ಅಪ್ಪಾಸಾಹೇಬ ಬಿರಾದಾರ, ರೋಹಿತ ಪಾಟೀಲ ಕತ್ತೆಗೆ ಕಾಲು ಹಿಡಿದು ನಮಸ್ಕಾರ ಮಾಡುವ ಮೂಲಕ ಮದುವೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.ಗ್ರಾಮದ ಹನುಮಾನ ದೇವಾಲಯದ ಬಳಿ ಈ ಮದುವೆ ಕಾರ್ಯಕ್ರಮವನ್ನು ನಡೆಸಲಾಯಿತು. ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಸ್ವಾಮಿಗಳು ಮದುವೆಯನ್ನ ಶಾಸ್ತ್ರೋತ್ಯವಾಗಿ ನಡೆಸಿಕೊಟ್ಟರು. ಗ್ರಾಮಸ್ಥರು ಈ ಮದುವೆಗೆ ಸಾಕ್ಷಿಯಾಗಿದ್ದರು.