ಸಾರಾಂಶ
ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಟ್ರೇಡ್ ಲೈಸನ್ಸ್ ಇಲ್ಲದ ಕಾರಣ ಕತ್ತೆಗಳ ಮಾರಾಟ ಕಂಪನಿಗೆ ಸದ್ಯ ಬೀಗ ಹಾಕಲಾಗಿದೆ.
ಹೊಸಪೇಟೆ: ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ್ದ ಕತ್ತೆಗಳ ಖರೀದಿ ಕಂಪನಿಗೆ ಟ್ರೇಡ್ ಲೈಸನ್ಸ್ ಪಡೆಯದ ಕಾರಣ ಇಲ್ಲಿನ ನಗರಸಭೆ ಅಧಿಕಾರಿಗಳು ಮಂಗಳವಾರ ತಾತ್ಕಾಲಿಕವಾಗಿ ಬೀಗ ಜಡಿದಿದ್ದಾರೆ.
ಕಳೆದ ಮೂರು ತಿಂಗಳಿಂದ ರೈತರಿಂದ ಲಕ್ಷ, ಲಕ್ಷ ಹಣ ಪಡೆದು ಕತ್ತೆಗಳನ್ನು ಮಾರಾಟ ಮಾಡ್ತಿದ್ದ ಕಂಪನಿ ವಿರುದ್ಧ ಕೆಲ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರಗೆ ಮನವಿ ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಪರಿಶೀಲಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಟ್ರೇಡ್ ಲೈಸನ್ಸ್ ಇಲ್ಲದ ಕಾರಣ ಸದ್ಯ ಬೀಗ ಹಾಕಲಾಗಿದೆ. ಹೆಚ್ಚಿನ ತನಿಖೆ ಸಂಬಂಧಿಸಿದ ಇಲಾಖೆಯಿಂದ ನಡೆಯಲಿದೆ ಎಂದು ಪಿಡಿ ಮನೋಹರ್ ಸುದ್ದಿಗಾರರಿಗೆ ತಿಳಿಸಿದರು.ಆಂಧ್ರ ಪ್ರದೇಶದ ಅನಂತಪುರ ಮೂಲದ ಕಂಪನಿ ನಗರದಲ್ಲಿ ಕಚೇರಿ ತೆರೆದಿತ್ತು. ಒಬ್ಬರಿಂದ ₹3 ಲಕ್ಷ ಪಡೆದು ಮೂರು ಹೆಣ್ಣು ಕತ್ತೆ, ಮೂರು ಕತ್ತೆ ಮರಿ ನೀಡುತಿತ್ತು. ಕತ್ತೆ ಸಾಕಲು ಮುಂದೆ ಬರುವವರಿಂದ ಹಣ ಪಡೆದು ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಲಕ್ಷ ಗಟ್ಟಲೆ ವ್ಯವಹಾರ ನಡೆಸುವ ಕಂಪನಿ ಬಳಿ ಕನಿಷ್ಠ ಒಂದು ಟ್ರೇಡ್ ಲೈಸೆನ್ಸ್ ಇಲ್ಲದಿರುವುದು ಭಾರೀ ಚರ್ಚೆಗೀರು ಮಾಡಿದೆ.