ನಗರದಲ್ಲಿ 7 ವರ್ಷಗಳಿಂದ ಸ್ಕೇಟಿಂಗ್ ತರಬೇತಿ ನೀಡುತ್ತಿರುವ ಅದ್ವೈತ ಸ್ಕೇಟಿಂಗ್ ಕ್ಲಬ್ ಪ್ರಸ್ತುತ ಸ್ಕೇಟಿಂಗ್ ಕ್ರೀಡಾಂಗಣ ವಿಸ್ತರಣೆ ಯೋಜನೆ ಹಮ್ಮಿಕೊಂಡಿದ್ದು, ದಾನಿಗಳ ಸಹಕಾರದ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ನಗರದಲ್ಲಿ 7 ವರ್ಷಗಳಿಂದ ಸ್ಕೇಟಿಂಗ್ ತರಬೇತಿ ನೀಡುತ್ತಿರುವ ಅದ್ವೈತ ಸ್ಕೇಟಿಂಗ್ ಕ್ಲಬ್ ಪ್ರಸ್ತುತ ಸ್ಕೇಟಿಂಗ್ ಕ್ರೀಡಾಂಗಣ ವಿಸ್ತರಣೆ ಯೋಜನೆ ಹಮ್ಮಿಕೊಂಡಿದ್ದು, ದಾನಿಗಳ ಸಹಕಾರದ ಅಗತ್ಯವಿದೆ ಎಂದು ಕ್ಲಬ್ ಅಧ್ಯಕ್ಷ ಕಿರಣಕುಮಾರ ಕುಡಾಳಕರ ಹೇಳಿದರು.

ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸ್ಕೇಟಿಂಗ್ ತರಬೇತಿ 2018ರಲ್ಲಿ ಆರಂಭವಾಗಿದೆ. 2019ರಲ್ಲಿ ಸೋಂದೆ ವಾದಿರಾಜ ಮಠದ ಸ್ವಾಮೀಜಿ ಶಿರಸಿಯಲ್ಲಿ ನೀಡಿದ್ದ ನಿವೇಶನದಲ್ಲಿ ಕ್ಲಬ್ಬಿನ ಪಾಲಕ, ಪೋಷಕರ ಸಹಕಾರದಿಂದ ಜಿಲ್ಲೆಯ ಪ್ರಥಮ ಸ್ಕೇಟಿಂಗ್ ಕ್ರೀಡಾಂಗಣ ನಿರ್ಮಾಣ ಮಾಡಲಾಗಿತ್ತು. ನಂತರ ಜಿಲ್ಲೆಯ ಹಾಗೂ ಶಿರಸಿಯ 2,500ಕ್ಕೂ ಹೆಚ್ಚು ಕ್ರೀಡಾಪಟುಗಳು, ಆಸಕ್ತ ಯುವಕರು ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಇಲ್ಲಿಯವರೆಗೆ ಇಲ್ಲಿ ಕಲಿತ 150ಕ್ಕೂ ಹೆಚ್ಚು ಸ್ಕೇಟಿಂಗ್ ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 50ಕ್ಕೂ ಹೆಚ್ಚಿನ ಕ್ರೀಡಾಪಟುಗಳಿಗೆ ಕಂಚು, ಬೆಳ್ಳಿ ಹಾಗೂ ಬಂಗಾರದ ಪದಕ ಲಭಿಸಿದೆ. 2025ರಲ್ಲಿ ಶಿರಸಿಯಿಂದ 12 ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಟೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಮ್ಮ ಕ್ಲಬಿನ ಕ್ರೀಡಾಪಟುಗಳಾದ ಆರುಷಿ ಪ್ರಭು (ಎರಡು ಕಂಚು), ಮೋಹಿತ ದೇವಾಡಿಗ (ಎರಡು ಬಂಗಾರ), ಕಾವ್ಯಾ ನಾಯ್ಕ (ಒಂದು ಕಂಚು), ಆರ್ಯನ ಗೌಳಿ(ಒಂದು ಬೆಳ್ಳಿ) ಪದಕ ಪಡೆದಿದ್ದಾರೆ. ರಾಜ್ಯ ಮಟ್ಟದ ಶಾಲಾ ವಿಭಾಗದ ಸ್ಪೀಡ್ ಸ್ಟೇಟಿಂಗ್ ಸ್ಪರ್ಧೆಯಲ್ಲಿ ನಮ್ಮ ಕ್ರೀಡಾಪಟುಗಳಾದ ಮೋಹಿತ ದೇವಾಡಿಗ (ಎರಡು ಬಂಗಾರ) ಪಡೆದಿದ್ದಾನೆ. ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಹಾಕಿ ಸ್ಪರ್ಧೆಯಲ್ಲಿ ನಮ್ಮ ಕ್ಲಬ್ಬಿನ ಐದು ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕಾರವಾರದಿಂದ ಬೆಂಗಳೂರು ವಿಧಾನಸೌಧದವರೆಗೆ 620 ಕಿಮೀ ಸ್ಟೇಟಿಂಗ್ ಮಾಡಿರುವ ಕ್ರೀಡಾಪಟುಗಳು ಕ್ಲಬ್ಬಿನಲ್ಲಿದ್ದಾರೆ. ಇಂಥ ವಿಶೇಷ ಕ್ರೀಡಾಳುಗಳ ಜತೆ ಇನ್ನಷ್ಟು ಪ್ರತಿಭಾವಂತರು ಇದ್ದಾರೆ. ಹೀಗಾಗಿ ತಾಲೂಕಲ್ಲಿ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ತರಬೇತಿ ಅವಶ್ಯಕತೆ ಇದೆ. ಕಾರಣ ಅದ್ವೈತ ಸ್ಕೇಟಿಂಗ್ ಕ್ರೀಡಾಂಗಣವನ್ನು ಉನ್ನತಿಕರಣ ಮಾಡಲು ಉದ್ದೇಶಿಸಲಾಗಿದೆ ಎಂದರು.

ಕ್ರೀಡಾಂಗಣದ ಉನ್ನತಿಕರಣಕ್ಕಾಗಿ ಅಂದಾಜು ₹8 ಲಕ್ಷ ವೆಚ್ಚವಾಗಲಿದೆ. ಕಾರಣ ಆಸಕ್ತ ಕ್ರೀಡಾ ಪೋಷಕರು ಸಹಕರಿಸಿದ್ದಲ್ಲಿ ನಮ್ಮ ತಾಲೂಕಿನ ಅಲ್ಲದೇ ಜಿಲ್ಲೆಯ ಅನೇಕ ಸ್ಕೇಟಿಂಗ್ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಸಾಧನೆಗೆ ಸಹಕಾರಿಯಾಗಲಿದೆ ಎಂದರು.

ತರಬೇತುದಾರರಾದ ತರುಣ ಗೌಳಿ, ಪ್ರಕಾಶ ಮರಾಠಾ ಇತರರಿದ್ದರು.