ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಹಳೇಬೀಡು ಹೋಬಳಿ ಕರಿಕಟ್ಟೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಪಾಠಶಾಲೆಗೆ ದಾನಿಗಳಾದ ದಯಾನಂದ್ ಕಾವ್ಯ ಅವರು ತಮ್ಮ ಹಿರಿಯರ ಹೆಸರಿನಲ್ಲಿ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇನ್ನಿತರ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಕರಿಕಟ್ಟೆಹಳ್ಳಿ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕ ಸಿ.ಎಚ್.ದೇವರಾಜ್ ಮಾತನಾಡಿ, ನಮ್ಮ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೂ ಒಟ್ಟು 19 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ನಾವುಗಳು ಪ್ರತಿಯೊಂದು ಮನೆಮನೆಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರ ನೀಡುವಂತಹ ಸವಲತ್ತುಗಳನ್ನು ಜೊತೆ ಉತ್ತಮ ಪಾಠ, ಪ್ರವಚನದ ಬೋಧನೆಯ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ವಿನಂತಿ ಮಾಡಲಾಗಿದೆ. ಇದೇ ಗ್ರಾಮದ ದಯಾನಂದ್ ಮತ್ತು ಕಾವ್ಯ ಎಂಬುವವರು ತಮ್ಮ ಹಿರಿಯರಾದ ನಂಜಮ್ಮ ಮತ್ತು ವಿಶ್ವನಾಥ್ ಇವರ ಹೆಸರಿನಲ್ಲಿ ಈಗಾಗಲೇ ಶಾಲೆಗೆ 32 ಇಂಚಿನ ಟಿವಿಯನ್ನು ನೀಡಿದ್ದಲ್ಲದೆ ಮಕ್ಕಳಿಗೆ ಅಗತ್ಯ ಇರುವಂತಹ ಕಂಪ್ಯೂಟರ್, ಪ್ರಿಂಟರ್ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೋಮಶೇಖರ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಯಲ್ಲಿ ತಾಂತ್ರಿಕ ವಿಷಯಗಳನ್ನು ಪಾಠ ಮಾಡುವುದು ಕೂಡ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ಬಳಕೆಯನ್ನು ಮಾಡಿಕೊಳ್ಳುವುದರ ಮೂಲಕವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಸೋಮಶೇಖರ, ಕರಿಕಟ್ಟೆಹಳ್ಳಿ ಸರ್ಕಾರಿ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ವಿನೋದ್, ಉಪಾಧ್ಯಕ್ಷೆ ಗೌರಮ್ಮ, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸುಧಾ, ಗ್ರಾಮ ಪಂಚಾಯತಿ ಸದಸ್ಯ ತೀರ್ಥಪ್ಪ, ಮಾಜಿ ಅಧ್ಯಕ್ಷ ನಾಗಣ್ಣ ಶಾಲಾ ಸಹ ಶಿಕ್ಷಕರಾದ ಜೆ.ಟಿ.ತಾರಾ ಮತ್ತು ಭರತ್ ಇದ್ದರು.