ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕೇವಲ 10 ಮಕ್ಕಳಿರುವ ಫಂಡಿಜೆ ವಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾನಿಗಳು ವಾಹನದ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದಾರೆ.10 ಮಕ್ಕಳೊಂದಿಗೆ ಈ ಬಾರಿ ಫೆ.22ರಂದು ಶಾಲಾ ವಾರ್ಷಿಕೋತ್ಸವ ನಡೆಸಿ ಸುದ್ದಿಯಾಗಿದ್ದ ಈ ಶಾಲೆಯಲ್ಲಿ 7 ತರಗತಿಗಳಿವೆ.ಈ ಶಾಲೆಯನ್ನು ಉಳಿಸುವುದು ಸವಾಲಾಗಿತ್ತು. ಕಳೆದ ಶೈಕ್ಷಣಿಕ ಸಾಲಿನ 7ನೇ ತರಗತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿಸೋಜ, ಜನ ವಸತಿ ಕಡಿಮೆ ಇರುವ ಈ ಪ್ರದೇಶದಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಅಗತ್ಯ ಉಚಿತ ವಾಹನದ ವ್ಯವಸ್ಥೆ ಕುರಿತು ಪ್ರಸ್ತಾಪಿಸಿದ್ದರು.ಕುಕ್ಕೇಡಿ ಗ್ರಾ.ಪಂ. ಸದಸ್ಯ, ಶಾಲಾ ಎಸ್‌ಡಿಎಂಸಿ ಸದಸ್ಯ ದಿನೇಶ್ ಮೂಲ್ಯ, ಮಕ್ಕಳ ದಾಖಲಾತಿ ಹೆಚ್ಚಿದರೆ ಉಚಿತ ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿ, 2024-25ನೇ ಸಾಲಿನ ಜೂನ್ ಪ್ರಥಮ ಕಂತು 6 ಸಾವಿರ ರು. ಒದಗಿಸಿದ್ದರು. ಮುಖ್ಯ ಶಿಕ್ಷಕಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಭವನೀಶ್ ಅವರನ್ನು ಸಂಪರ್ಕಿಸಿ ತಾನು ಸೇರಿ 250 ರು.ನಂತೆ ಪ್ರತಿ ತಿಂಗಳು ಅಥವಾ 10 ತಿಂಗಳ 2,500 ರು. ಕೊಡಬಹುದಾದ ದಾನಿಗಳನ್ನು ಸಂಪರ್ಕಿಸಿದ್ದರು.ಸುಮಾರು 24 ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದಕ್ಕಾಗಿ ಒಂದು ವಾಟ್ಸಾಪ್ ಗ್ರೂಪ್ ರಚಿಸಿ ಗ್ರಾ.ಪಂ. ಸದಸ್ಯರು, ಸ್ಥಳೀಯರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಹಾಯ ಪಡೆಯಲು ಆರಂಭಿಸಿದರು. ಇದರ ಪರಿಣಾಮ ವಾಹನದ ವ್ಯವಸ್ಥೆಯಾಗಿದ್ದು, ಪ್ರಸ್ತುತ 10ರಲ್ಲಿ 8 ಮಕ್ಕಳು ಈ ವಾಹನದ ಉಪಯೋಗವನ್ನು ಪಡೆಯುತ್ತಿದ್ದಾರೆ.