ದಾನಿಗಳು ಶಿಕ್ಷಣ ಕ್ಷೇತ್ರಕ್ಕೆ ಸಹಕಾರ ನೀಡಲಿ: ಕೆ.ಎಸ್. ಆನಂದ್

| Published : Feb 02 2025, 01:02 AM IST

ಸಾರಾಂಶ

ಕಡೂರು, ಶಿಕ್ಷಣ ಕ್ಷೇತ್ರಕ್ಕೆಉಳ್ಳವರು ದಾನದ ರೂಪದಲ್ಲಿ ನೆರವು ನೀಡಿದರೆ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ಶಿಕ್ಷಣ ಕ್ಷೇತ್ರಕ್ಕೆಉಳ್ಳವರು ದಾನದ ರೂಪದಲ್ಲಿ ನೆರವು ನೀಡಿದರೆ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಶನಿವಾರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಅನುದಾನ ನೀಡಿದರೂ ಉದ್ಯಮಿಗಳು, ಉಳ್ಳವರು ಶಾಲಾ-ಕಾಲೇಜುಗಳಿಗೆ ಬೇಕಾಗಿರುವಂತಹ ವಸ್ತುಗಳನ್ನು ದಾನವಾಗಿ ನೀಡಿದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಇದನ್ನು ಸಾರ್ವಜನಿಕರು, ಹಣವಂತರು ಅಳವಡಿಸಿಕೊಂಡರೆ ಉತ್ತಮ ಶಿಕ್ಷಣ ಕೊಡಲು ಸಾಧ್ಯವಿದೆ ಎಂದರು. ಈ ಕಾಲೇಜಿನ ಪ್ರಾಂಶುಪಾಲ ಶಾಂತಕುಮಾರ್ ಅವರು ನನಗೂ ಗುರುಗಳಾಗಿದ್ದರು. ಇಂತಹ ಗುರುಗಳಿಂದ ಕಲಿಯುತ್ತಿರುವ ನೀವುಗಳು ಪುಣ್ಯವಂತರು ಎಂದು ಶಾಂತಕುಮಾರ್ ಅವರ ಕರ್ತವ್ಯವನ್ನು ಶ್ಲಾಘಿಸಿ ಅಭಿನಂದಿಸಿದರು. ದ್ವಿತೀಯ ಪಿಯುಸಿ ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಪರ್ವವಾಗಿದೆ ಉಳಿದಿರುವ 2 ತಿಂಗಳ ಕಾಲ ಮೊಬೈಲ್, ಟಿವಿ ಯಿಂದ ದೂರವಿದ್ದು ಹೆಚ್ಚಿನ ಸಮಯವನ್ನು ಕಲಿಕೆಗೆ ಮೀಸಲಿಟ್ಟರೆ ಸಾಧನೆ ಮಾಡಲು ಸಾಧ್ಯ ಇದೆ ಎಂದರು.

ಈಗಾಗಲೇ ಈ ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು 500 ಗಡಿ ದಾಟಿರುವ ಬಾಲಕಿಯರ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ ಇದೆ ಎಂದರು.

ಮಹಿಳೆಯರ ಶೈಕ್ಷಣಿಕ ಪ್ರಗತಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದ್ದು ಉತ್ತಮವಾಗಿ ಕಲಿತು ಕಾಲೇಜಿಗೆ ಉತ್ತಮ ಫಲಿತಾಂಶ ನೀಡಿ ಮುಂಬರುವ ವಾರ್ಷಿಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಎಂದು ಶುಭ ಹಾರೈಸಿದರು. ಪ್ರಾಂಶುಪಾಲ ಜಿ.ಪಿ.ಶಾಂತ ಕುಮಾರ್ ಮಾತನಾಡಿ, ಶಾಸಕರು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಯಾವುದೇ ಕೆಲಸ ಕಾರ್ಯಗಳಿದ್ದರೂ ಪೂರೈಸಿಕೊಟ್ಟಿದ್ದಾರೆ. ಇದೀಗ ದಾನಿ ರಾಘವೇಂದ್ರ ಅವರು ನೀಟ್, ಸಿಇಟಿ ಪರೀಕ್ಷೆ ತಯಾರಿಗೆ ಸ್ಮಾರ್ಟ್ ಕ್ಲಾಸ್ ನಡೆಸಲು ಪ್ರೊಜೆಕ್ಟರ್ ನೀಡಿದ್ದಾರೆ ಇದರಿಂದ ಮಕ್ಕಳಿಗೆ ಸಹಾಯವಾಗಲಿದೆ ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರುದ್ರೇಗೌಡ, ಪುರಸಭಾ ಸದಸ್ಯ ಶ್ರೀಕಾಂತ್, ದಾನಿ ರಾಘವೇಂದ್ರ, ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ್, ಚೌಳಹಿರಿಯೂರು ಉಪನ್ಯಾಸಕ ಹನುಮಂತಪ್ಪ, ಮಂಜುನಾಥ್, ಜ್ಞಾನೇಶ್, ಶ್ರೀನಿವಾಸ್, ಮುಖ್ಯ ಶಿಕ್ಷಕ ಸುರೇಶ್ ಹಾಗೂ ಉಪನ್ಯಾಸಕರು ಸಿಬ್ಬಂದಿ ಮತ್ತು ಮಕ್ಕಳು ಇದ್ದರು.1ಕೆಕೆಡಿಯು1.

ಕಡೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು,ಪ್ರಾಂಶುಪಾಲ ಜಿ.ಪಿ.ಶಾಂತಕುಮಾರ್,ರುದ್ರೇಗೌಡರು ಮತ್ತಿತರರು ಇದ್ದರು.