ಪರಕೀಯ ಸಂಸ್ಕೃತಿಯ ದಾಸರಾಗಬೇಡಿ: ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

| Published : Mar 09 2025, 01:48 AM IST

ಪರಕೀಯ ಸಂಸ್ಕೃತಿಯ ದಾಸರಾಗಬೇಡಿ: ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಧರ್ಮಸಭೆ ನಡೆಯಿತು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ತುಲಾಭಾರ ನೆರವೇರಿಸಲಾಯಿತು.

ಹಾನಗಲ್ಲ: ಭಕ್ತಿಗೆ ಬಡತನ ಸಿರಿತನವೆಂಬ ಭೇದವಿಲ್ಲ, ಪಾಪಕ್ಕೆ ಪ್ರೇರಣೆಯಾಗುವ ಕುಕೃತ್ಯಕ್ಕೆ ಕುಮ್ಮಕ್ಕು ನೀಡಿದಿರಿ, ಮಕ್ಕಳಿಗೆ ಸಂಸ್ಕಾರ ಕೊಡಿ, ಪರಕೀಯ ಸಂಸ್ಕೃತಿಯ ದಾಸರಾಗಬೇಡಿ ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಆಯೋಜಿಸಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಗ್ರಾಮಸ್ಥರಿಂದ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಧರ್ಮ ಕಾರ್ಯ ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಡುತ್ತವೆ. ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ಹೆಸರಿನಲ್ಲಿ ಕೌಟುಂಬಿಕ ಸಂಬಂಧಗಳು ಹಳಸುತ್ತಿವೆ. ಎಲ್ಲ ಕಾಲಕ್ಕೂ ಸಲ್ಲುವ ಸಂಸ್ಕೃತಿಯಿಂದ ದೂರ ಸರಿಯುತ್ತಿರುವ ಮನುಷ್ಯನಿಗೆ ನಾಗರಿಕತೆಯ ಹೆಸರಿನ ಅನಾಗರಿಕತೆ ಕಾಡುತ್ತಿದೆ. ಪರಕೀಯ ಸಂಸ್ಕೃತಿಯ ದಾಸರಾಗಿ ಸಮಾಜಕ್ಕೂ ಕುಟುಂಬಕ್ಕೂ ಬೇಡವಾದ ಸ್ಥಿತಿಯಲ್ಲಿ ಹಲವು ಕುಟುಂಬಗಳ ಸ್ಥಿತಿ ಇದೆ. ವಿಘಟಿತ ಕುಟುಂಬಗಳ ಹಿರಿ ಕಿರಿಯರು ತೀರ ಸಂಕಷ್ಟದ ಜೀವನ ನಡೆಸುವ ಸ್ಥಿತಿಗೆ ಬಂದಿದ್ದಾರೆ. ದುಡ್ಡೇ ಎಲ್ಲದಕ್ಕೂ ಮುಖ್ಯವಲ್ಲ, ಮಾನವೀಯ ಮೌಲ್ಯಗಳು ಮುಖ್ಯ. ಕೌಟುಂಬಿಕ ಸಾಮರಸ್ಯಕ್ಕೆ ಒತ್ತು ನೀಡಿಬೇಕು. ಕಷ್ಟ-ಸುಖಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಅದಕ್ಕಾಗಿಯೇ ಧರ್ಮ ಸಂಸ್ಕಾರಗಳು ಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಧರ್ಮದ ನಡೆಯಿಂದ ನಮ್ಮ ಗ್ರಾಮೀಣ ಪರಿಸರ ವಿಮುಖವಾಗಬಾರದು. ಪ್ರೀತಿ-ವಿಶ್ವಾಸಗಳಿಂದ ನಡೆದುಕೊಳ್ಳುತ್ತಿರುವ ಹಳ್ಳಿಯ ಒಳ್ಳೆಯ ಸಂಬಂಧದ ಜೀವನ ವಿಧಾನ ಉಳಿಯುವ ಮೂಲಕ ಗ್ರಾಮೀಣ ಸಂಸ್ಕೃತಿ ಉಳಿಸುವ ಹೊಣೆ ನಮ್ಮದಾಗಬೇಕು. ಭವಿಷ್ಯದ ಪೀಳಿಗೆಗೆ ಗ್ರಾಮ ಭಾರತದ ಸಂತೋಷದ ಕ್ಷಣಗಳನ್ನು ಉಳಿಸಬೇಕಾಗಿದೆ. ಹಿರಿಯರ ಮಾರ್ಗದರ್ಶನ, ಅವರ ಜೀವನ ವಿಧಾನದಲ್ಲಿನ ಕೂಡಿ ಬಾಳುವಿಕೆಯ ಪರಿಚಯ ಪಾಲನೆಗೆ ಪ್ರೋತ್ಸಾಹಿಸಬೇಕಾಗಿದೆ. ಪಟ್ಟಣದ ಕಡೆ ಮುಖ ಮಾಡುತ್ತಿರುವ ಯುವಕರನ್ನು ನಮ್ಮ ಗ್ರಾಮೀಣ ಜೀವನಕ್ಕೆ ಒಗ್ಗಿಸಿ ಉಳಿಸುವ ದೊಡ್ಡ ಹೊಣೆ ಈಗಿನ ಹಿರಿಯರದಾಗಿದೆ. ಕೃಷಿಯಿಂದ ವಿಮುಖವಾಗುತ್ತಿರುವ ಹೊಸ ಪೀಳಿಗೆಗೆ ಕೃಷಿಯಲ್ಲಿನ ಸಂತೋಷ ಗಳಿಕೆಯ ನಿಜಾಂಶದ ಪರಿಚಯವೂ ಆಗಬೇಕಾಗಿದೆ ಎಂದರು.

ಪ್ರಧಾನ ಅರ್ಚಕ ಸಂಗಯ್ಯಶಾಸ್ತ್ರಿ ಹಿರೇಮಠ ಮಾತನಾಡಿ, ಸಾಂವಸಗಿ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ ಕಾರ್ಯಗಳ ಮೂಲಕ ಒಂದು ಉತ್ತಮ ಸಂಸ್ಕಾರಕ್ಕೆ ಶ್ರಮಿಸಿದ್ದೇನೆ. ಇಲ್ಲಿನ ಜನರ ಸಹಕಾರದಿಂದ ನಾನು ಸಂತಸ ಜೀವನಕ್ಕೆ ಕಾರಣನಾಗಿದ್ದೇನೆ. ಧರ್ಮ ಸಂಸ್ಕಾರಗಳಿಂದ ಶ್ರೀ ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗಿರುವ ಈ ಗ್ರಾಮದ ಜನರಿಗೆ ಧರ್ಮಾಚರಣೆಯ ಸಂಕಲ್ಪವಿದೆ. ಅದರಿಂದ ಇಡೀ ಗ್ರಾಮಕ್ಕೆ ಒಳ್ಳೆಯದಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ, ಗ್ರಾಪಂ ಉಪಾಧ್ಯಕ್ಷೆ ಹುಸೇನಬಿ ಮುರಡಿ, ಸದಸ್ಯೆ ಪಾರ್ವತೆವ್ವ ಕರಭೀಮಣ್ಣನವರ ಅತಿಥಿಗಳಾಗಿದ್ದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ಈರಣ್ಣ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.