ಸಾರಾಂಶ
ಕುಕನೂರು: ಪಟ್ಟಣದ ವಾರ್ಡ್‌ಗಳಿಗೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಹಲವು ಕ್ರಮಕೈಗೊಂಡಿದ್ದು, ಸದ್ಯ ಇರುವ ನೀರಿನ ಮೂಲಗಳಿಂದ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ಹೊಸ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಪಪಂ ಸದಸ್ಯರು ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಪಟ್ಟಣಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆ ಮಂಜೂರಾಗಿದೆ. ಇದರ ಕುರಿತು ೧೯ ವಾರ್ಡ್‌ಗಳ ಸದಸ್ಯರ ಗಮನಕ್ಕೆ ತರುವ ಮೂಲಕ ಪ್ರತಿಮನೆ ಮನೆಗೆ ನೀರಿನ ಪೈಪ್‌ಗಳನ್ನು ಅಳವಡಿಸಬೇಕು. ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಎಂಜಿನಿಯರ್‌ಗಳು ಪಟ್ಟಣದಲ್ಲಿಯೇ ಕಚೇರಿ ಪ್ರಾರಂಭಿಸಿ, ಕಾಮಗಾರಿಯ ಬಗ್ಗೆ ನಿಗಾ ವಹಿಸಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಸುಖಮುನಿ ಎಂ. ನಾಯಕ ಮಾತನಾಡಿ, ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆ ಅನುದಾನದಡಿಯಲ್ಲಿ ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು, ಯಲಬುರ್ಗಾ ಪಟ್ಟಣಗಳಿಗೆ ಹಾಗೂ ಮಾರ್ಗ ಮಧ್ಯದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ತಳಕಲ್, ತಳಬಾಳ, ಭಾನಾಪುರ ಹಾಗೂ ಟಾಯ್ ಕ್ಲಸ್ಟರ್ ಇಂಡಸ್ಟ್ರಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಯಾಗಿದೆ. ಅದರಲ್ಲಿ ಕುಕನೂರು ಪಟ್ಟಣದಲ್ಲಿ ೫ ಲಕ್ಷ ಲೀಟರ್ ಸಾಮರ್ಥ್ಯದ ಮೂರು ಮೇಲ್ಮಟ್ಟ ಜಲಸಂಗ್ರಹಗಾರಗಳ ನಿರ್ಮಾಣ ನಡೆಯುತ್ತಿದೆ. ಪಟ್ಟಣದ ವ್ಯಾಪ್ತಿಯ ಸುಮಾರು ೯೨.೦೬ ಕಿಮೀ ವಿತರಣಾ ಜಾಲ ಅಳವಡಿಸಲಾಗಲಿದ್ದು, ೬,೧೦೮ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುವುದು. ಪ್ರಸ್ತುತ ಯೋಜಯ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಇದಕ್ಕೆ ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಪ್ರತಿಕ್ರಿಯೆ ನೀಡಿ, ಯೋಜನೆಗಳು ಪತ್ರಿಕೆಯಲ್ಲಿ ಸಾಕಷ್ಟು ಅಚ್ಚುಕಟ್ಟಾಗಿರುತ್ತವೆ. ಯೋಜನೆ ಪ್ರಾರಂಭಗೊಂಡ ನಂತರ ಇದರ ಆಳ-ಅಗಲ ತಿಳಿಯುತ್ತದೆ. ಈ ಹಿಂದೆ ಎಲ್ ಆ್ಯಂಡ್ ಟಿ ಕಂಪನಿಯಿಂದ ಕುಡಿಯುವ ನೀರಿನ ಯೋಜನೆ ನಡೆಸುವ ಸಂದರ್ಭದಲ್ಲಿ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ, ಕಾಮಗಾರಿ ಸರಿಯಾಗಿ ನಡೆಯಬೇಕು ಎಂದರು.ಇನ್ನೋರ್ವ ಸದಸ್ಯ ಗಗನ್ ನೋಟಗಾರ ಮಾತನಾಡಿ, ಕುಡಿಯುವ ನೀರಿನ ಹಳೆ ಪೈಪ್‌ಗಳಿಗೆ ಹೊಸ ಯೋಜನೆಯ ಪೈಪ್ ಜೋಡಣೆ ಮಾಡಬಾರದು. ಹೊಸ ಪೈಪ್‌ಲೈನ್ ಅಳವಡಿಸಿ ಮನೆ ಮನೆಗೆ ನೀರು ಒದಗಿಸಬೇಕು ಎಂದರು.
ಸದಸ್ಯ ಜಗನ್ನಾಥ ಭೋವಿ ಮಾತನಾಡಿ, ಪಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ಯಾವ ವಿಷಯ ಕೂಡ ತರುವುದಿಲ್ಲ. ಸದಸ್ಯರನ್ನು ಕೀಳಾಗಿ ನೋಡುತ್ತಿದ್ದಾರೆ. ನಮ್ಮ ವಾರ್ಡ್‌ಗಳಲ್ಲಿ ಕಾಮಗಾರಿ ನಡೆದರೂ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಜಾತ್ರೆ ನಡೆದರೂ ಸಭೆ ನಡೆಸಿಲ್ಲ. ಅಲ್ಲದೇ ಕೆಲ ವಾರ್ಡ್‌ಗಳನ್ನು ಸ್ಲಂಗಳೆಂದು ಪ್ರಸ್ತಾವನೆ ಸಲ್ಲಿಸಿದ್ದು, ನಮ್ಮ ವಾರ್ಡ್ ಅನ್ನು ಸ್ಲಂ ಎಂದು ಪ್ರಸ್ತಾವನೆ ಸಲ್ಲಿಸಬೇಕು ಎಂದರು. ಇದಕ್ಕೆ ಪಪಂ ಮುಖ್ಯಾಧಿಕಾರಿ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದಿನ್‌ಸಾಬ್ ಗುಡಿಹಿಂದಿಲ್, ಸದಸ್ಯರಾದ ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ಲಕ್ಷ್ಮೀ ಸಬರದ, ಶಿವರಾಜಗೌಡ ಯಲ್ಲಪ್ಪಗೌಡರು, ನೇತ್ರಾವತಿ ಮಾಲಗಿತ್ತಿ, ರಾಧಾ ದೊಡ್ಡಮನಿ, ಕವಿತಾ ಹೂಗಾರ, ಮಂಜುನಾಥ ಕೊಳೂರು, ಮಲ್ಲಿಕಾರ್ಜುನ ಚೌದ್ರಿ, ಫೀರದೋಸ್ ಬೇಗಂ ಇತರರಿದ್ದರು.