ಸಾರಾಂಶ
ಕುಷ್ಟಗಿ:
ಮಲೇರಿಯಾದ ಜ್ವರದ ಬಗ್ಗೆ ಉದಾಸೀನ ತೋರಬಾರದು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಹೇಳಿದರು.ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಬಿಜಿಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೇರಿಯಾ ಜ್ವರವು ಸೊಳ್ಳೆ ಕಚ್ಚುವುದರಿಂದ ಹರಡುತ್ತಿದ್ದು ಜಾಗೃತಿ ಕಾರ್ಯಕ್ರಮ ಹಾಗೂ ಉತ್ತಮ ಔಷಧಿಗಳ ಪೂರೈಕೆಯಿಂದಾಗಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಆದರೂ ಮಲೇರಿಯಾ ಕುರಿತು ನಿರ್ಲಕ್ಷ ವಹಿಸಬಾರದು ಎಂದರು.ಮನುಷ್ಯ ಹಣ, ಆಸ್ತಿ ಸಂಪಾದಿಸಬಹುದು. ಆದರೆ, ಆರೋಗ್ಯ ಹದಗೆಟ್ಟರೆ ಸಂಪಾದಿಸುವುದು ಕಠಿಣ. ಹೀಗಾಗಿ ಪ್ರತಿಯೊಬ್ಬರು ಸುತ್ತಲಿನ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೊಳ್ಳೆ ನಿಯಂತ್ರಿಸಿದರೆ ಕಾಯಿಲೆ ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಲಾಜಿ ಬಳಿಗಾರ ಮಾತನಾಡಿ, ಹೆಣ್ಣು ಅನಾಫಿಲಿಸ್ ಸೊಳ್ಳೆಯು ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾರ್ವಜನಿಕರು ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆರೋಗ್ಯದ ಕುರಿತು ಜಾಗೃತಿ ವಹಿಸಬೇಕು ಎಂದು ತಿಳಿಸಿದರುಜಾಗೃತಿ ಜಾಥಾದಲ್ಲಿ ಸಹಾಯಕ ಆಡಳಿತಾಧಿಕಾರಿ ಸೈಯದ್ ರಹಿಂ, ತಾಂತ್ರಿಕ ಮೇಲ್ವಿಚಾರಕ ಪ್ರಕಾಶ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಪಿ. ಸುಶೀಲ, ಪ್ರಾಂಶುಪಾಲ ಅನಿಲಕುಮಾರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸಿತರಿದ್ದರು. ಜಾಗೃತಿ ಜಾಥಾವು ಘೋಷವಾಕ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.