ಚನ್ನಪಟ್ಟಣದ ಚಾಮುಂಡಿ ದೇಗುಲಕ್ಕೆ ವೃದ್ಧರು, ಮಕ್ಕಳ ಕರೆತರಬೇಡಿ: ಡಾ.ಮಲ್ಲೇಶ್ ಗುರೂಜಿ

| Published : Jul 16 2024, 12:40 AM IST

ಚನ್ನಪಟ್ಟಣದ ಚಾಮುಂಡಿ ದೇಗುಲಕ್ಕೆ ವೃದ್ಧರು, ಮಕ್ಕಳ ಕರೆತರಬೇಡಿ: ಡಾ.ಮಲ್ಲೇಶ್ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಆಷಾಢಮಾಸ ಮುಗಿಯುವವರೆಗೆ ವೃದ್ಧರು, ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರು ಹಾಗೂ ಅನಾರೋಗ್ಯ ಪೀಡಿತರು ದಯಮಾಡಿ ಚನ್ನಪಟ್ಟಣದ ಚಾಮುಂಡೇಶ್ವರಿ ದೇವಾಲಯ ಕ್ಷೇತ್ರಕ್ಕೆ ಆಗಮಿಸದಂತೆ ದೇವಾಲಯದ ಧರ್ಮಾಧಿಕಾರಿ ಡಾ.ಮಲ್ಲೇಶ್ ಗುರೂಜಿ ಮನವಿ ಮಾಡಿದ್ದಾರೆ.

ಆಷಾಢ ಮಾಸದ ಹಿನ್ನೆಲೆ ದೇವಾಲಯಕ್ಕೆ ಭಕ್ತರ ದಂಡು

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನ ಗೌಡಗೆರೆ ಗ್ರಾಮದಲ್ಲಿನ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ದೇವಸ್ಥಾನಕ್ಕೆ ಆಷಾಢ ಮಾಸದ ಪ್ರಯುಕ್ತ ಬರುವ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲಾ ಭಕ್ತರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಷಾಢಮಾಸ ಮುಗಿಯುವವರೆಗೆ ವೃದ್ಧರು, ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರು ಹಾಗೂ ಅನಾರೋಗ್ಯ ಪೀಡಿತರು ದಯಮಾಡಿ ಕ್ಷೇತ್ರಕ್ಕೆ ಆಗಮಿಸದಂತೆ ದೇವಾಲಯದ ಧರ್ಮಾಧಿಕಾರಿ ಡಾ.ಮಲ್ಲೇಶ್ ಗುರೂಜಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕ್ಷೇತ್ರಕ್ಕೆ ಆಷಾಢಮಾಸದ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ದೇವಿಯ ದರ್ಶನ, ಬಸವಪ್ಪ ಆಶೀರ್ವಾದ, ತೀರ್ಥ ಸ್ನಾನ ಹಾಗೂ ಕಾಯಿ ಹಾಗೂ ಉಪ್ಪಿನ ಹರಕೆ ಹೊರಲು ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಶುಕ್ರವಾರ, ಮಂಗಳವಾರ, ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲಿ ಈ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ. ಹೆಚ್ಚು ಭಕ್ತರು ಸೇರುವ ಕಾರಣ ವಯೋವೃದ್ಧರು ಹಾಗೂ ಚಿಕ್ಕಮಕ್ಕಳಿಗೆ ಅನನುಕೂಲವಾಗುತ್ತಿದೆ. ಆಷಾಢ ಮಾಸ ಮುಗಿಯುವವರೆಗೆ ಕ್ಷೇತ್ರಕ್ಕೆ ಬಾರದಂತೆ ಮನವಿ ಮಾಡಿದ್ದಾರೆ.

ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸವಲತ್ತುಗಳನ್ನು ಒದಗಿಸಲು ಸಾಕಷ್ಟು ಶ್ರಮಿಸುತ್ತಿದ್ದೇವೆ. ನಿರಂತರವಾಗಿ ಅನ್ನ ದಾಸೋಹ ನಡೆಯುತ್ತಿದೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಳ್ಳುತ್ತಿರುವ ಕಾರಣ ದರ್ಶನ ವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ. ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚು ಅನನುಕೂಲ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.