ಸಾರಾಂಶ
ಹುಬ್ಬಳ್ಳಿ: ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಡಿ. 31ರಂದು ರಾತ್ರಿ ಪಾಶ್ಚಾತ್ಯ ಹೊಸ ವರ್ಷ ಆಚರಣೆ ಮಾಡಬಾರದು ಎಂದು ಆಗ್ರಹಿಸಿ ಶ್ರೀರಾಮಸೇನೆ ಹುಬ್ಬಳ್ಳಿ ಘಟಕದ ವತಿಯಿಂದ ಸೋಮವಾರ ಹೋಟೆಲ್‌ನ ಮಾಲೀಕರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿಯ ಉಣಕಲ್‌ನಲ್ಲಿರುವ ಪ್ರೆಸಿಡೆಂಟ್ ಹೋಟೆಲ್, ರಾಯಲ್ ರಿಡ್ಜ್, ಹನ್ಸ್ ಸೇರಿದಂತೆ ಪ್ರಮುಖ ಹೋಟೆಲ್‌ಗಳ ಮಾಲೀಕರಿಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಆಚರಿಸದಂತೆ ಮನವಿ ಮಾಡಿದರು.ಡಿ. 31ರಂದು ವಿದೇಶಗಳಲ್ಲಿ ಹೊಸವರ್ಷ ಆಚರಿಸುತ್ತಾರೆ. ಕುಡಿತ, ಕುಣಿತ, ಮಾದಕ ವಸ್ತುಗಳ ಸೇವನೆ, ಅಶ್ಲೀಲತೆ ಮುಂತಾದ ಅನೈತಿಕ ಚಟುವಟಿಕಗಳು ಹೊಸ ವರ್ಷದ ಸಮಯದಲ್ಲಿ ನಡೆಯುತ್ತವೆ. ಇವು ಯುವ ಸಮುದಾಯಕ್ಕೆ ದಾರಿ ತಪ್ಪಿಸುವ ಕೆಲಸವಾಗಿವೆ. ಮುಂದೆ ಇದು ಸಮಾಜಕ್ಕೆ ಕಂಟಕವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾಧ್ಯಮದವರೊಂದಿಗೆ ಮಾತನಾಡಿ, ಡಿ. 31ರಂದು ಪಾಶ್ಚಾತ್ಯ ಆಚರಣೆಯಾಗಿದೆ. ಅಷ್ಟೇ ಅಲ್ಲದೇ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದ ಹಿನ್ನೆಲೆ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದೆ. ಈ ಸಮಯದಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರ ಅವಕಾಶ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಮೊಸಳೆ ಕಣ್ಣೀರು ಸುರಿಸುವುದು ಬಿಟ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಗಣೇಶ ಉತ್ಸವ ಸಮಯದಲ್ಲಿ 10 ಗಂಟೆಗೆ ಡಿಜೆ ಬಂದ್ ಮಾಡಿಸಲಾಗಿತ್ತು. ಆದರೆ, ಹೊಸ ವರ್ಷಾಚರಣೆ ವೇಳೆ ಮಧ್ಯರಾತ್ರಿವರೆಗೂ ಅವಕಾಶ ನೀಡುತ್ತಾರೆ. ಇದಕ್ಕೆ ಶ್ರೀರಾಮಸೇನೆ ವಿರೋಧ ಮಾಡಲಿದೆ. ಇದನ್ನು ಮೀರಿ ಹೊಸ ವರ್ಷ ಆಚರಿಸಿದರೇ ತಡಿಯುವ ಕೆಲಸ ನಮ್ಮ ಸಂಘಟನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ತಾಲೂಕು ಅಧ್ಯಕ್ಷ ಬಸು ದುರ್ಗದ, ನಗರ ಅಧ್ಯಕ್ಷ ಬಸು ಗೌಡರ, ನಗರ ಉಪಾಧ್ಯಕ್ಷ ಗುಣಧರ ದಡೋತಿ ಇದ್ದರು.