ಸಂಶೋಧಕರು ಸಂಶೋಧನೆಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಕೇವಲ ಪದವಿಗಾಗಿ ಸಂಶೋಧನೆ ಕೈಗೊಳ್ಳಬಾರದು ಎಂದು ಹೆಸರಾಂತ ವಿಮರ್ಶಕರಾದ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.
ಹೊಸಪೇಟೆ: ಸಾಮಾಜಿಕ ಹೊಣೆಗಾರಿಕೆ ಎಂಬುದು ಸಂಶೋಧನೆಗೆ ಮಾತ್ರವಲ್ಲದೆ ಸಮಾಜದ ಯಾವುದೇ ಕ್ಷೇತ್ರದಲ್ಲಿರುವ ಅಥವಾ ಯಾವುದೇ ವೃತ್ತಿಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಇರಬೇಕಾದ ಜವಾಬ್ದಾರಿ ಹಾಗೂ ಪದ್ಧತಿಯಾಗಿದೆ ಎಂದು ಹೆಸರಾಂತ ವಿಮರ್ಶಕರೂ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಅಧ್ಯಯನಾಂಗದ ವತಿಯಿಂದ ಮಂಗಳವಾರ ನಡೆದ ಯುಜಿಸಿ ಪಿಎಚ್.ಡಿ. ಕೋರ್ಸ್ ವರ್ಕ್ ಎರಡನೇ ಹಂತದ ಕಾರ್ಯಕ್ರಮದಲ್ಲಿ ''''ಸಂಶೋಧನೆ ಮತ್ತು ಸಾಮಾಜಿಕ ಹೊಣೆಗಾರಿಕೆ'''' ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಶೋಧಕರು ಸಂಶೋಧನೆಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಕೇವಲ ಪದವಿಗಾಗಿ ಸಂಶೋಧನೆ ಕೈಗೊಳ್ಳಬಾರದು. ಈ ಹಿನ್ನೆಲೆಯಲ್ಲಿ ಸಂಶೋಧಕನು ತನ್ನ ಕ್ಷೇತ್ರದಲ್ಲಿ ತಜ್ಞತೆ ಹೊಂದಿರಬೇಕು. ಪ್ರಸ್ತುತ ದಿನಗಳಲ್ಲಿ ಸಂಶೋಧನೆಗೆ ಇರುವ ದೊಡ್ಡ ಸವಾಲು ಎಂದರೆ ಈಗಾಗಲೇ ದೊರೆತಿರುವ ಮಾಹಿತಿಯನ್ನು ಯಾವ ದೃಷ್ಟಿಯಿಂದ ಹಾಗೂ ಯಾವ ಹಿತಾಸಕ್ತಿಯಿಂದ ಅರ್ಥಮಾಡಿಕೊಳ್ಳಬೇಕು ಎನ್ನುವುದಾಗಿದೆ. ಯಾವುದೇ ವಿಷಯವನ್ನು ಆಧರಿಸಿ ಅಧ್ಯಯನ ನಡೆಸಿದರೂ ಅದನ್ನು ಸರಿಯಾದ ದೃಷ್ಟಿಕೋನದಿಂದ ಪ್ರಸ್ತುತಪಡಿಸಬೇಕು ಎಂದು ಹೇಳಿದರು.ಖ್ಯಾತ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅವರು ಅಂತರ್ ಶಿಸ್ತೀಯ ಸಂಶೋಧನೆ ವಿಷಯ ಕುರಿತು ಮಾತನಾಡಿ, ಸಂಶೋಧನೆಯಲ್ಲಿ ಹೊಸ ವಿಷಯವನ್ನು ಕಂಡುಹಿಡಿದರೆ ಅದು ಆವಿಷ್ಕಾರವಾಗುತ್ತದೆ. ಅದೇ ರೀತಿ ಹಿಂದೆ ಕಳೆದುಹೋಗಿರುವ ವಿಷಯಗಳನ್ನು ಹುಡುಕಿದರೆ ಅದು ಅನ್ವಯಿಕ ಸಂಶೋಧನೆ ಎಂದು ಕರೆಯಲ್ಪಡುತ್ತದೆ. ಯಾವುದೇ ಒಂದು ಸಂಶೋಧನೆ ಏಕಮುಖವಾಗಿರದೆ, ಅನೇಕ ವಿಷಯಗಳನ್ನು ಬಳಸಿಕೊಂಡು ಮೂಲಸತ್ಯವನ್ನು ಹುಡುಕುವ ಪ್ರಯತ್ನ ಮಾಡಬೇಕು. ಈ ಹಿನ್ನೆಲೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನ ಸಂಶೋಧನೆಯಲ್ಲಿ ಅತ್ಯಂತ ಮುಖ್ಯವಾಗುತ್ತದೆ ಎಂದು ಹೇಳಿದರು.ಹಂಪಿ ವಿವಿಯ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂತರ್ ಶಿಸ್ತೀಯ ಹಾಗೂ ಬಹುಶಿಸ್ತೀಯ ಅಧ್ಯಯನಗಳು ನಡೆಯುತ್ತಿವೆ. ದಲಿತರ, ದಮನಿತರ ಹಾಗೂ ಮಹಿಳೆಯರ ಕುರಿತು ಅಧ್ಯಯನಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಸಂಶೋಧನೆಯಲ್ಲಿ ಏಕಮುಖತೆಯಿರದೆ ವಿವಿಧ ಆಯಾಮಗಳಲ್ಲಿ ಅಧ್ಯಯನಗಳು ನಡೆಯುವುದು ಮುಖ್ಯ ಎಂದು ಹೇಳಿದರು.
ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು, ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಬಂಜೆಗೆರೆ ಜಯಪ್ರಕಾಶ್ ಹಾಗೂ ಡಾ. ಜೆ.ಎಂ. ನಾಗಯ್ಯ ಅವರನ್ನು ಸನ್ಮಾನಿಸಲಾಯಿತು.