ಹೆಣ್ಣು ಮಗುವಿನ ತಾತ್ಸಾರ, ತಿರಸ್ಕಾರದ ಭಾವನೆ ಬೇಡ

| Published : Oct 19 2024, 12:16 AM IST

ಸಾರಾಂಶ

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವವಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು.

ಧಾರವಾಡ:

ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಯ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಇದ್ದು ಇದು ಹೋಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಜತೆಗೂಡಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ "ಬೇಟಿ ಬಚಾವೋ ಬೇಟಿ ಪಡಾವೋ " ಯೋಜನೆಯಡಿ ಜಿಲ್ಲೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ವಿವಿಧ ಕಾಯ್ದೆಗಳ ಕುರಿತ ಹಮ್ಮಿಕೊಂಡಿದ್ದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವವಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು. ಬಸವಣ್ಣ, ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವರು ಮಹಿಳೆಯರ ಶಿಕ್ಷಣ ಹಕ್ಕು, ಸಮಾನತೆ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕಿಸುವಲ್ಲಿ ಹೆಚ್ಚು ಆದ್ಯತೆ ನೀಡಿದ್ದರು. ಈ ಸ್ಥಾನಮಾನ ಮುಂದುವರಿಯಬೇಕೆಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಹೆಚ್ಚುತ್ತಿದೆ. ಭ್ರೂಣ ಹತ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಭ್ರೂಣ ಹತ್ಯೆ ತಡೆಯಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಮಾತನಾಡಿ, ಶಿಕ್ಷಣದಿಂದ ಬದಲಾವಣೆ ಕಾಣಬಹುದು. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕು. ಭ್ರೂಣ ಹತ್ಯೆ ತಡೆಗಟ್ಟಲು ಸಮಾಜದಲ್ಲಿ ಉತ್ತಮ ಸಂದೇಶ ಬಿತ್ತರಿಸುವ ಕೆಲಸವಾಗಬೇಕು ಎಂದು ಹೇಳಿದರು.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಯೋಗೇಂದ್ರ ಕಬಾಡಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ನಿರ್ವಹಿಸಬೇಕಾದ ದಾಖಲಾತಿ ಹಾಗೂ ವಿವರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅರವಳಿಕೆ ತಜ್ಞ ಹಾಗೂ ವೈದ್ಯಕೀಯ ಸಲಹೆಗಾರ ಡಾ. ಶಿವಕುಮಾರ ಕುಂಬಾರ, ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರು ಸ್ವಾಗತಿಸಿದರು. ಸುಜಾತಾ ಮುರಾರಿ ನಿರೂಪಿಸಿದರು. ಡಾ. ಕಮಲಾ ಬೈಲೂರ ವಂದಿಸಿದರು. ಡಾ. ಮಹೇಶ ಚಿತ್ತರಗಿ ಉಪಸ್ಥಿತರಿದ್ದರು.