ಧಾರವಾಡ:

ಆಧುನಿಕರಣ, ಉದಾರೀಕರಣ, ಜಾಗತೀಕರಣಗಳ ಮಧ್ಯದಲ್ಲಿ ನಮ್ಮತನ ಮರೆಯುತ್ತಿದ್ದೇವೆ. ಇದರ ಪರಿಣಾಮವಾಗಿ ಮೂಲ ಜನಪದ ಸಂಸ್ಕೃತಿ ಸಂಪ್ರದಾಯಗಳು ಮಾಯವಾಗುತ್ತಿವೆ. ಆದರೆ, ಅವುಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಕೊಂಡೊಯ್ಯ ಕೆಲಸವಾಗಬೇಕಿದೆ ಎಂದು ಕವಿವಿ ಜಾನಪದ ವಿಭಾಗದ ಅಧ್ಯಕ್ಷ ಡಾ. ವಿ.ಎಲ್‌. ಪಾಟೀಲ ಹೇಳಿದರು.

ಹುಬ್ಬಳ್ಳಿಯ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಸ್ಥೆಯ ಜತೆಗೂಡಿ ನಗರದ ರಾಣಿ ಚೆನ್ನಮ್ಮ ನಗರದ ಗಣೇಶ ದೇವಸ್ಥಾನದ ಆವರಣದಲ್ಲಿ ನಡೆದ ಮೂಲ ಜನಪದ ಹಾಡುಗಾರಿಕೆ ತರಬೇತಿ ಶಿಬಿರ ಉದ್ಘಾಟಿಸಿದ ಅವರು, ಜನಪದ ಸಾಹಿತ್ಯ ನಮ್ಮ ಹಿರಿಯರು ಕೊಟ್ಟು ಹೋದ ಬಳುವಳಿ. ಈ ಸಾಹಿತ್ಯ ನಮ್ಮೆಲ್ಲರನ್ನು ತಿದ್ದಿ ಬುದ್ಧಿ ಹೇಳುವ ಜತೆಗೆ ಸರಿದಾರಿಗೆ ತರುವ ಸಾಹಿತ್ಯವಾಗಿದೆ. ಅಲ್ಲದೆ ಇಂಥ ತರಬೇತಿಗಳನ್ನು ತಾಯಂದಿರಿಗೆ ನೀಡುವ ಮೂಲಕ ಜನಪದ ಸಂಸ್ಕೃತಿ ಸಂಪ್ರದಾಯಗಳು ಉಳಿಸುವ ಕಾರ್ಯ ಶ್ಲಾಘನೀಯ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪುರ, ಮೂಲ ಜನಪದ ಸಾಹಿತ್ಯದಲ್ಲಿ ಸತ್ವ ಮತ್ತು ತತ್ವ ಅಡಗಿದೆ. ಇಂಥ ಸಾಹಿತ್ಯವನ್ನು ನಾವಿಂದು ಮಕ್ಕಳಿಗೆ ಹೇಳಿ ಕೊಡಬೇಕು ಎಂದು ಹೇಳಿದರು.

ಇದೇ ವೇಳೆ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಕಾಶ ಮಲ್ಲಿಗವಾಡ, ನಿವೃತ್ತ ಶಿಕ್ಷಕ ಎಫ್.ಬಿ. ಕಣವಿ ಅವರನ್ನು ಗೌರವಿಸಲಾಯಿತು. ಸುಜಾತ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿ.ವಿ. ಹಿರೇಮಠ, ವೃಂದಾ ಕುಲಕರ್ಣಿ, ಬಸವರಾಜ ಬಾಗೇವಾಡಿ, ಶಿವಣ್ಣ ಬೆಂಗೇರಿ ಇದ್ದರು. ಡಾ. ರಾಮು ಮೂಲಗಿ ಶಿಬಿರಾರ್ಥಿಗಳಿಗೆ 10 ದಿನಗಳ ಕಾಲ ನಡೆಯುವ ತರಬೇತಿಯ ಕುರಿತು ಮಾಹಿತಿ ನೀಡಿದರು. ಶೋಭಾ ಭೂಮರೆಡ್ಡಿ ನಿರೂಪಿಸಿದರು.