ಸಾರಾಂಶ
ಬ್ಯಾಡಗಿ: ಧೂಮಪಾನ, ಮದ್ಯಪಾನ, ಅಫೀಮು ಸೇವನೆ ಇನ್ನಿತರ ದುಶ್ಚಟಗಳನ್ನು ಕೆಲವರು ಅತಿಯಾಗಿ ಅಳವಡಿಸಿಕೊಳ್ಳುವ ಮೂಲಕ ಸ್ವಯಂ-ವಿನಾಶಕಾರಿ ಹಂತಕ್ಕೆ ತಲುಪುತ್ತಿದ್ದಾರೆ. ಇಂತಹ ದುಶ್ಚಟಗಳಿಗೆ ಅಂಟಿಕೊಂಡವರು ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಉದ್ದಿಮೆದಾರ ನಾಗರಾಜ ಆನ್ವೇರಿ ಕರೆ ನೀಡಿದರು.
ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಮ್ಮಲ್ಲಿರುವ ದುಶ್ಚಟಗಳು ಹಾಗೂ ಅದರಿಂದ ಬೀರುವಂತಹ ಪರಿಣಾಮಗಳು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸಲಿದೆ. ಅಲ್ಲದೆ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದರು.ಮನೋಸ್ವಾಸ್ಥ್ಯ ಕಾಪಾಡಿಕೊಳ್ಳಿ: ಕೃಷಿ ಸಮಾಜದ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ವ್ಯಸನಮುಕ್ತರಾಗಲು ದೈಹಿಕ ಆರೋಗ್ಯಕ್ಕಿಂತ ಮನೋ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಕುಟುಂಬದ ಹಿರಿಯರು ದುರ್ವ್ಯಸನಿಗಳಾದಲ್ಲಿ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರಲಿದೆ. ಒಂದು ವೇಳೆ ಮಕ್ಕಳು ದುರ್ವ್ಯಸನಿಗಳಾದಲ್ಲಿ ಪ್ರೀತಿ, ಆದರಗಳನ್ನು ತೋರುವ ಮೂಲಕ ವ್ಯಸನಮುಕ್ತರನ್ನಾಗಿ ಮಾಡಲು ಸಾಧ್ಯ. ಗುಟ್ಕಾ, ತಂಬಾಕು ಸೇವನೆ, ಮದ್ಯ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗದೇ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಲು ಸಲಹೆ ನೀಡಿದ ಅವರು, ಮಧ್ಯ ಹಾಗೂ ತಂಬಾಕುಮುಕ್ತ ಗ್ರಾಮ ಪರಿಕಲ್ಪನೆಗೆ ಎಲ್ಲರೂ ಜತೆಗೂಡಬೇಕಿದೆ. ಒಂದು ವೇಳೆ ಗ್ರಾಮದಲ್ಲಿ ಮದ್ಯ ನಿಷೇಧ ಮಾಡಿದಲ್ಲಿ ಶೇ. 90ರಷ್ಟು ಯುವಕರ ಬದುಕು ಹಸನಾಗಲಿದೆ ಎಂದರು.
ಮುಖ್ಯ ಶಿಕ್ಷಕ ಲಿಂಗರಾಜ ಸುತ್ತಕೋಟಿ ಮಾತನಾಡಿ, ಸಮುದಾಯಗಳು ಮಾಡಬೇಕಾದ ಕಾರ್ಯವನ್ನು ಸಂಘ, ಸಂಸ್ಥೆಗಳು ಮಾಡುತ್ತಿವೆ. ನಾಳೆಯ ಪ್ರಜೆಗಳಾದ ಮಕ್ಕಳನ್ನು ಜಾಗ್ರತಗೊಳಿಸಿದರೆ ಒಳ್ಳೆಯ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಾಗಲಿದೆ ಎಂದರು.ಚಂದ್ರು ಹೋತನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮಾಲತೇಶ ಚಳಗೇರಿ, ಹರೀಶ ಹಿತ್ತಲಮನಿ, ಶಿಕ್ಷಕರಾದ ರವಿ ಚೌಟಗಿ, ಶಿವರಾಜ್ ಕಲಾಲ್, ದೇವೇಂದ್ರಪ್ಪ, ನಾಗರತ್ನಾ ಮಡಿವಾಳರ, ಅರ್ಪಣಾ ಅಂಬಿಗೇರ, ರೇಣುಕಾ, ಲಕ್ಷ್ಮಿ, ಅಮೂಲ್ಯಾ, ಸರಸ್ವತಿ ಭಾಗವಹಿಸಿದ್ದರು.