ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಎಂದಿಗೂ ಅವಕಾಶ ನೀಡಬೇಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Nov 09 2024, 01:10 AM IST / Updated: Nov 09 2024, 12:52 PM IST

ಸಾರಾಂಶ

ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಎಂದಿಗೂ ಅವಕಾಶ ನೀಡಬೇಡಿ. ಇಂಥವರಿಗೆ ಅಧಿಕಾರ ಕೊಟ್ಟರೆ ಲೂಟಿ ಹೊಡೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕುರುಗೋಡು: ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಎಂದಿಗೂ ಅವಕಾಶ ನೀಡಬೇಡಿ. ಇಂಥವರಿಗೆ ಅಧಿಕಾರ ಕೊಟ್ಟರೆ ಲೂಟಿ ಹೊಡೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯನ್ನು ಜನಾರ್ದನ ರೆಡ್ಡಿ ಸಿಂಗಾಪುರ, ಬೀಜಿಂಗ್ ಮಾಡುವೆ ಅಂತ ಹೇಳ್ತಾರೆ. ರೆಡ್ಡಿ ಬೆಂಬಲಿಸುತ್ತಿರುವ ಬಿಜೆಪಿ ಅಭ್ಯರ್ಥಿಯನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು. ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲಿನಿಕ್ ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಅಭಿವೃದ್ಧಿ ಬಗ್ಗೆ ಹೆಚ್ಚು ಒಲವು ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಸಂಸದ ಈ. ತುಕಾರಾಂ ಪತ್ನಿ ಅನ್ನಪೂರ್ಣಾ ಅವರಿಗೆ ಮತ ಚಲಾಯಿಸಿ, ನನ್ನ ಕೈಬಲ ಬಡಿಸಬೇಕು ಎಂದು ಮನವಿ ಮಾಡಿದರು.

ರೈತರ ಹಿತದೃಷ್ಟಿಯಿಂದ ಬೇಸಿಗೆ ಬೆಳೆಗೂ ನೀರು ಹರಿಸುತ್ತೇವೆ. ಬಿಜೆಪಿ ಮಂಡಿಸಿದ ಆಯ-ವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕೇವಲ ₹೨೧ ಸಾವಿರ ಕೋಟಿ ಮೀಸಲಿಟ್ಟಿದ್ದರು. ಕಾಂಗ್ರೆಸ್ ಸರ್ಕಾರ ₹೩೯,೧೨೧ ಕೋಟಿ ಮೀಸಲಿಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ₹೫ ಸಾವಿರ ಕೋಟಿ ನೀಡಿದ್ದೇವೆ. ಜನಸಾಮಾನ್ಯರ ಅಭಿವೃದ್ಧಿಗಾಗಿ ಏನು ಬೇಕು? ಎಲ್ಲ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವಧಿಯಲ್ಲಿ ಜಾರಿಗೆ ತಂದಿರುವ ೩೭೧ಜೆ ಪರಿಣಾಮ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ೭ ಜಿಲ್ಲೆಯ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿದೆ. ಈ ಭಾಗದ ಹೆಚ್ಚು ಯುವಕರಿಗೆ ಉದ್ಯೋಗ ದೊರೆತಿದೆ. ಇದನ್ನು ಬಿಜೆಪಿಯ ವಾಜಪೇಯಿ, ಎಲ್.ಕೆ. ಆಡ್ವಾಣಿ ವಿರೋಧಿಸಿದ್ದರು. ಹೈದರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿ ಮಾಡಿದ್ದು ಕಾಂಗ್ರೆಸ್. ನಮ್ಮ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮತ್ತು ನಾನು ಸೇರಿ 371 ಜೆ ಜಾರಿ ಮಾಡಿದ್ದೇವೆ. ಬಳಿಕ ನಾನು ಸಿಎಂ ಆಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5000 ಕೋಟಿ ಅನುದಾನ ನೀಡಿದೆ. 371 ಜೆ ಬಂದಿದ್ದರಿಂದ ಇಲ್ಲಿನ ಮಕ್ಕಳು ಎಂಜಿನಿಯರ್, ಡಾಕ್ಟರ್ ಆದರು. ಸರ್ಕಾರಿ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಲು ಅವಕಾಶವಾಯಿತು ಎಂದರು.

ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ, ಸಚಿವರಾದ ಸಂತೋಷ್ ಲಾಡ್ ಮತ್ತು ಶಿವರಾಜ್ ತಂಗಡಗಿ, ಶಾಸಕ ಬಿ.ನಾಗೇಂದ್ರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಜಯ್ ಸಿಂಗ್ ಮತ್ತು ಜೆ.ಎನ್. ಗಣೇಶ್ ಮಾತನಾಡಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮಾಜಿ ಶಾಸನ ಪಿ.ಟಿ. ಪರಮೇಶ್ವರ ನಾಯಕ್ ಮತ್ತು ಭೀಮಾ ನಾಯಕ್, ಬಿ.ವಿ. ಶಿವಯೋಜಿ, ಅಲ್ಲಂ ಪ್ರಶಾಂತ್, ಅಮರೇಶ ಶಾಸ್ತ್ರೀ, ಗಂಗಾಧರ ಗೌಡ, ಕೆ. ಗಂಗಣ್ಣ, ಕೆ. ಅಮರೇಶ್, ಎಸ್. ತಮ್ಮನಗೌಡ, ವಿನಾಯಕ, ಸದಾನಂದ, ವಿನಯ್ ಇದ್ದರು.