ಸಾರಾಂಶ
ಸಂಡೂರು: ದುಶ್ಚಟಗಳಿಗೆ ಒಳಗಾಗುವುದರಿಂದ ಆರೋಗ್ಯ ಹಾಳಾಗುವುದಲ್ಲದೆ, ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ. ಜನತೆ ದುಶ್ಚಟಗಳನ್ನು ಬಿಟ್ಟು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಂ ತಿಳಿಸಿದರು. ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಬಳ್ಳಾರಿ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ, ಮದ್ಯವರ್ಜನಾ ಶಿಬಿರದ ಸಮಾರೋಪ, ವ್ಯಸನಮುಕ್ತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯವರ್ಜನಾ ಶಿಬಿರದಲ್ಲಿ ಪಾಲ್ಗೊಂಡು ಮದ್ಯ ವರ್ಜನೆ ಮಾಡಿದವರು ಶಿಬಿರದಲ್ಲಿ ಕಲಿತ ಯೋಗ, ಧ್ಯಾನ ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಮದ್ಯ ವರ್ಜನೆ ಮಾಡಿದವರ ಕುಟುಂಬಸ್ಥರಲ್ಲಿ ನೆಮ್ಮದಿ ಹಾಗೂ ಸಂತೋಷ ಕಾಣುತ್ತಿದೆ. ಈ ನೆಮ್ಮದಿ, ಸಂತೋಷ ಶಾಶ್ವತವಾಗಿರಲಿ ಎಂದರು.ತಾಲೂಕಿನ ಗಡಿ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟದ ವಿರುದ್ಧ ನಾನು ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಿದೆ. ಅದನ್ನು ಟೆಸ್ಟಿಗೆ ಕಳಿಸಿದ್ದಾಗ, ಆಘಾತಕಾರಿ ವಿಷಯ ತಿಳಿದು ಬಂದಿತು. ಈ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಹೋರಾಟ ನಡೆಸಿದ್ದೇನೆ. ತಾಲ್ಲೂಕಿನಲ್ಲಿ ಕಾರ್ಮಿಕರ ಸಂಖೆ ಹೆಚ್ಚಿದೆ. ಏನೇ ಕೆಲಸದ ಒತ್ತಡವಿದ್ದರೂ, ಜನತೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್ ಮಾತನಾಡಿ, ಜನತೆಯನ್ನು ದುಶ್ಚಟಗಳಿಂದ ಮುಕ್ತರನ್ನಾಗಿಸಲು ಡಾ.ವಿರೇಂದ್ರ ಹೆಗಡೆಯವರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯ ಕಾರ್ಯವಾಗಿದೆ. ಜನತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಬೇಕು ಎಂದು ವಿವರಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕರಾದ ಜೆ. ಚಂದ್ರಶೇಖರ್ ಮಾತನಾಡಿ, ಸಂಸ್ಥೆ ವತಿಯಿಂದ ಈವರೆಗೆ 1986, ಜಿಲ್ಲೆಯಲ್ಲಿ 26 ಹಾಗೂ ಸಂಡೂರಿನಲ್ಲಿ 5 ವ್ಯಸನ ಮುಕ್ತ ಶಿಬಿರಗಳನ್ನು ನಡೆಸಲಾಗಿದೆ. ಶಿಬಿರಗಳ ಮೂಲಕ 1.36 ಲಕ್ಷ ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ. ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ದರೋಡೆ ಮುಂತಾದ ಕೆಟ್ಟ ಕೆಲಸಗಳಿಗೆ ಅಮಲು ಪದಾರ್ಥಗಳ ಸೇವನೆಯೂ ಕಾರಣವಾಗುತ್ತಿದೆ. ಸಮಾಜವನ್ನು ವ್ಯಸನ ಮುಕ್ತವಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಲೆಕ್ಕಿಮರದ ವಿರುಪಾಕ್ಷಪ್ಪ ಅವರು ಮಾತನಾಡಿದರು.ಮಾಲಾ ಹಾಗೂ ಶಾಂತಕುಮಾರಿ ಅವರು ಪ್ರಾರ್ಥಿಸಿದರು. ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸೂರ್ಯನಾರಾಯಣ ಸ್ವಾಗತಿಸಿದರು ತರಬೇತಿದಾರ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಟಿ.ವೆಂಕಟೇಶ್ ಹಾಗೂ ತಬಲಾ ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನೀಡಿದರು.
ಕಾರ್ಯಕ್ರಮದಲ್ಲಿ ಶಿಬಿರದ ಅಧ್ಯಕ್ಷ ಕರಡಿ ಯರಿಸ್ವಾಮಿ, ಸಂಸ್ಥೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಪುರಸಭೆಯ ಮಾಜಿ ಅಧ್ಯಕ್ಷ ಡಿ. ಕೃಷ್ಣಪ್ಪ, ಸದಸ್ಯ ಅಬ್ದುಲ್ ಮುನಾಫ್, ಬಿಜೆಪಿ ಸಂಡೂರು ಮಂಡಲ ಮಾಜಿ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಪಿ. ರವಿಕುಮಾರ್, ಗಡಾದ್ ರಮೇಶ್, ಬಸವರಾಜ ಬಣಕಾರ್, ಶಿವನಗೌಡ, ವಾಗೀಶ, ಕಿನ್ನೂರೇಶ್ವರ, ಕವಿತಾ, ಗಂಗಮ್ಮ, ಗಿರಿಜಾ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ವಿಜಯವೃತ್ತದಿಂದ ಆರಂಭಗೊಂಡ ಗಾಂಧಿ ಸ್ಮೃತಿ, ಜನ ಜಾಗೃತಿ ಜಾಥಾಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್ ಚಾಲನೆ ನೀಡಿದರು.