ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯ ಶಿಲಾ ಶಾಸನಕ್ಕೆ ಬೇಕಿದೆ ರಕ್ಷಣೆ

| Published : Oct 13 2025, 02:01 AM IST

ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯ ಶಿಲಾ ಶಾಸನಕ್ಕೆ ಬೇಕಿದೆ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವೇಶ್ವರ ದೇವಸ್ಥಾನದ ಬಳಿ ದೊರೆತಿರುವ ಮ್ಯಾಂಗನೀಸ್ ಶಿಲಾ ಶಾಸನವನ್ನು ಸಂರಕ್ಷಿಸುವ ಅಗತ್ಯವಿದೆ.

ಸಂಡೂರು: ಪಟ್ಟಣ ಸಮೀಪದ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿ ದೊರೆತಿರುವ ಮ್ಯಾಂಗನೀಸ್ ಶಿಲಾ ಶಾಸನವನ್ನು ಸಂರಕ್ಷಿಸುವ ಅಗತ್ಯವಿದೆ.ದೇವಸ್ಥಾನದ ಆವರಣದಲ್ಲಿರುವ 10ನೇ ಶತಮಾನದ್ದೆಂದು ಹೇಳಲಾಗುವ ಈ ಶಿಲಾಶಾಸನದ ಮೇಲೆ ಇತ್ತೀಚೆಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡವು ಬೆಳಕು ಚೆಲ್ಲಿ, ಅದರಲ್ಲಿ ಉಲ್ಲೇಖವಾದ ಅಂಶಗಳನ್ನು ಪ್ರಚುರ ಪಡಿಸಿತ್ತು.

ಶಿಲಾಶಾಸನದ ಎಡಗಡೆಗೆ ಸೂರ್ಯ, ಬಲಗಡೆಗೆ ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ಬಲಬದಿಯ ಚಂದ್ರನ ಬಳಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ. ಈ ಶಿಲಾಶಾಸನದಲ್ಲಿ ಇದರ ಕಾಲವನ್ನು ಉಲ್ಲೇಖಿಸಲಾಗಿಲ್ಲವಾದರೂ, ಅದರಲ್ಲಿನ ಲಿಪಿಯ ಶೈಲಿಯನ್ನು ಗಮನಿಸಿ ಈ ಶಾಸನವು 10ನೇ ಶಾಸನವಾಗಿರಬೇಕೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಶಾಸನದಲ್ಲಿ ರಂಗ ಸಮುದ್ರ ಎಂದು ಉಲ್ಲೇಖಿಸಲಾಗಿದೆ. ಈಗ ಕರೆಯುವ ನಾರಿಹಳ್ಳವನ್ನೇ ರಂಗ ಸಮುದ್ರ ಎಂದು ಕರೆದಿರಬಹುದೆಂದು ಊಹಿಸಲಾಗಿದೆ. ಮರುಜನ್ಮಕ್ಕೆ ವಿಳಸಿತನಾಗು ಎಂದು ಉಲ್ಲೇಖವಾಗಿರುವುದನ್ನು ಗಮನಿಸಿ, ಈ ಶಾಸನವು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ದೇವಸ್ಥಾನದ ಬಳಿಯಲ್ಲಿ ನಿರ್ಮಾಣ ಕಾರ್ಯ ನಡೆಸುವಾಗ ಗೋಚರವಾದ ಈ ಶಾಸನವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಬಳಿಯಲ್ಲಿ ಅದನ್ನು ಇಟ್ಟಿರುವುದಲ್ಲದೆ, ಶಿಲಾಶಾಸನ ಕುರಿತು ಒಂದು ಬೋರ್ಡನ್ನು ಅಳವಡಿಸಿದ್ದಾರೆ. ಈ ಶಾಸನದ ಮೇಲೆ ಇತ್ತೀಚೆಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡವು ಬೆಳಕು ಚೆಲ್ಲಿದೆ.

ಈ ಶಿಲಾಶಾಸನವು ಮ್ಯಾಂಗನೀಸ್ ಅಂಶವುಳ್ಳ ಕಾಡುಗಲ್ಲಿನ ಮೇಲೆ ಕೆತ್ತಲ್ಪಟ್ಟಿರುವುದು ಹಾಗೂ ಈ ಶಿಲಾಶಾಸನಕ್ಕೆ ಯಾವುದೇ ರಕ್ಷಣೆ ಇಲ್ಲದಿರುವ ಕಾರಣ, ಇದರಲ್ಲಿನ ಅಕ್ಷರಗಳು ಮಳೆಗಾಳಿಗೆ ಸಿಕ್ಕು ಸವೆದು ಹೋಗಿ ಕಣ್ಮರೆಯಾಗುವ ಸಂಭವವಿದೆ. ಈಗಾಗಲೇ ಈ ಶಾಸನದಲ್ಲಿನ ಕೆಲ ಅಕ್ಷರಗಳು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯವರು ಈ ಅಪರೂಪದ ಶಾಸನವನ್ನು ಸಂರಕ್ಷಿಸಲು ಕ್ರಮಕೈಗೊಳ್ಳಬೇಕಿದೆ.

ಕೋಟ್: ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ದೊರೆತಿರುವ ಮ್ಯಾಂಗನೀಸ್ ಬಂಡೆಕಲ್ಲಿನ ಶಾಸನವನ್ನು ಸಂರಕ್ಷಿಸಬೇಕಿದೆ. ಸಂರಕ್ಷಣೆಯಾಗದಿದ್ದರೆ, ಮಳೆಗಾಳಿಗೆ ಸಿಕ್ಕು ಅದರಲ್ಲಿನ ಅಕ್ಷರಗಳು ಅಳಿಸಿಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯ ಡಾ.ಗೋವಿಂದ.