ಆರ್‌ಎಸ್‌ಎಸ್‌ ಶತಾಬ್ದಿ: ಶಿಕ್ಷಕಿಯರ ಕುಟುಂಬ ಮಿಲನ

| Published : Oct 13 2025, 02:01 AM IST

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರದ ಶಿಕ್ಷಕಿಯರ ಕುಟುಂಬ ಮಿಲನ ಕಾರ್ಯಕ್ರಮ ಭಾನುವಾರ ಇಲ್ಲಿನ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾ ಸದನದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರದ ಶಿಕ್ಷಕಿಯರ ಕುಟುಂಬ ಮಿಲನ ಕಾರ್ಯಕ್ರಮ ಭಾನುವಾರ ಇಲ್ಲಿನ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾ ಸದನದಲ್ಲಿ ನೆರವೇರಿತು.

ವಿದ್ಯಾವಿಕಾಸ ಪ್ರಕಲ್ಪ ರಾಜ್ಯ ಸಮಿತಿಯ ಅಧ್ಯಕ್ಷೆ ಭಾರತಿ ನಂದಕುಮಾರ ಸಂಯೋಜಕತ್ವದ ಅಡಿ ಹುಬ್ಬಳ್ಳಿ ಮಹಾನಗರ, ಹುಬ್ಬಳ್ಳಿ ಗ್ರಾಮಾಂತರ, ಕುಂದಗೋಳ ಮತ್ತು ನವಲಗುಂದ ತಾಲೂಕುಗಳ 60 ಸ್ಥಾನಗಳ 72 ಶಿಕ್ಷಕಿಯರು ಹಾಗೂ 68 ಕುಟುಂಬಗಳಿಂದ ಒಟ್ಟು 162 ಜನ ಪರಿವಾರದ ಸದಸ್ಯರು ಈ ಕುಟುಂಬ ಮಿಲನದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಭಾರತಿ ನಂದಕುಮಾರ, ಸೇವಾ ಚಟುವಟಿಕೆಯಲ್ಲಿ ಕುಟುಂಬದ ಸದಸ್ಯರ ಪಾತ್ರ ಮತ್ತು ಸಹಕಾರ ಸಿಕ್ಕಲ್ಲಿ ಮಹಿಳೆ ಮನೆಯನ್ನು ಗೆದ್ದು ಸಮಾಜಕ್ಕೂ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಕುಟುಂಬ ಮಿಲನ ಕೇವಲ ಒಂದು ದಿನದ ಚಟುವಟಿಕೆಯಲ್ಲ, ಈ ಕಾರ್ಯಾಗಾರವು ಕುಟುಂಬ ಮತ್ತು ಸಮಾಜದ ಮಧ್ಯೆ ಸಮತೋಲನ ಸಾಧಿಸುವುದನ್ನು ತಿಳಿಯಪಡಿಸುವುದಾಗಿದೆ ಎಂದರು.

ಕನ್ನೂರು ಶಾಂತಿ ಕುಟೀರ ಆಶ್ರಮದ ಶ್ರೀಕೃಷ್ಣ ಸಂಪಗಾವಕರ ಗುರೂಜಿ ಮಾತನಾಡಿ, ಇಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ಜೀಜಾಮಾತೆಯ ಸ್ವರೂಪ ಎಂದಾದಲ್ಲಿ ಸಮಾಜಕ್ಕೆ ಶಿವಾಜಿ ಮಹರಾಜರಂತಹ ಮಹಾಪುರುಷರನ್ನು ನೀಡಲು ಸಾಧ್ಯ ಎಂದರು.

ಸೇವಾ ಭಾರತಿ ಟ್ರಸ್ಟಿನ ಅಧ್ಯಕ್ಷ ಪೂರ್ಣಚಂದ್ರರಾವ್‌ ಘಂಟಸಾಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕುಟುಂಬ ಪ್ರಭೋದನದ ಕಮಲಾ ಮಾತಾಜಿ, ಟ್ರಸ್ಟಿನ ಕಾರ್ಯದರ್ಶಿ ರಘೋತ್ತಮ ಅಕ್ಕಮಂಚಿ, ವಿಶ್ವಸ್ತ ಭರತ ಜೈನ, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ ಸೇರಿದಂತೆ ಹಲವರಿದ್ದರು. ಪ್ರಕಲ್ಪ ಸಮಿತಿಯ ಕಾರ್ಯದರ್ಶಿ ರಾಚಯ್ಯ ವಾರಿಕಲ್ಮಠ ಸ್ವಾಗತಿಸಿದರು. ರತ್ನಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.