ಪುರಾಣ, ಸಂಸ್ಕೃತಿಯನ್ನು ಬಿಡದಿರಿ: ಪ್ರಸಾದ್

| Published : Sep 06 2025, 01:01 AM IST

ಸಾರಾಂಶ

ನಮ್ಮ ಪ್ರಾಚೀನ ಸಂಸ್ಕೃತಿಯ ಬೇರು ಗಟ್ಟಿಯಿದ್ದರೆ ಉತ್ತಮ ಶೈಕ್ಷಣಿಕ ಸಂಸ್ಥೆಗಳು ಹುಟ್ಟುತ್ತವೆ ಎನ್ನುವುದಕ್ಕೆ ಈ ಸಂಸ್ಥೆ ಉತ್ತಮ ಉದಾಹರಣೆ.

ಹೊನ್ನಾವರ: ನಮ್ಮ ಪ್ರಾಚೀನ ಸಂಸ್ಕೃತಿಯ ಬೇರು ಗಟ್ಟಿಯಿದ್ದರೆ ಉತ್ತಮ ಶೈಕ್ಷಣಿಕ ಸಂಸ್ಥೆಗಳು ಹುಟ್ಟುತ್ತವೆ ಎನ್ನುವುದಕ್ಕೆ ಈ ಸಂಸ್ಥೆ ಉತ್ತಮ ಉದಾಹರಣೆ. ಪುರಾಣ ಮತ್ತು ಸಂಸ್ಕೃತಿಯನ್ನು ಬಿಡಬಾರದು ಅದನ್ನು ಈಗಿನ ಕಾಲಕ್ಕೆ ಅನುಕೂಲವಾಗುವಂತೆ ಮಾಡಿಕೊಳ್ಳಬೇಕು. ನೀವು ಶಿಕ್ಷಕ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ್ದಿರಿ ಎಂದು ಅಂಜುಮಾನ್ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರಸಾದ್ ಜಿ.ಬಿ. ಹೇಳಿದರು.

ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸಮೂಹ ಸಂಸ್ಥೆಯ ಅಡಿಯಲ್ಲಿ ಎಸ್.ಡಿ.ಎಂ. ಪದವಿ ಕಾಲೇಜಿನ‌ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ನಿಮಿತ್ತದ ಗುರುವಂದನಾ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ ಶಿಕ್ಷಕರನ್ನು ಬೆಳೆಸಬೇಕು ಹಾಗೆ ಶಿಕ್ಷಕ ಸಂಸ್ಥೆಯನ್ನು ಬೆಳೆಸಬೇಕು ಇದು ಉತ್ತಮ ಸಮಾಜದ ನಿರ್ಮಾಣಕ್ಕೆಪೂರಕ. ಭ್ರಷ್ಟಾಚಾರ ಇಲ್ಲದ ವೃತ್ತಿ ಎಂದರೆ ಶಿಕ್ಷಕ ವೃತ್ತಿ.ಶಿಕ್ಷಕ ಪ್ರತಿ ಕ್ಷಣವನ್ನು ಕಲಿಯುವಂತದ್ದು ಇರುತ್ತದೆ. ಕಲಿಕೆಯನ್ನು ಶಿಕ್ಷಕನಾದವನು ಯಾವತ್ತು ಮುಂದುವರಿಸಬೇಕು ಎಂದರು.

ಶಿಕ್ಷಕನಾದವನಿಗೆ ಹಲವು ಸವಾಲುಗಳು ಇರುತ್ತದೆ. ಅದನ್ನು ಸರಿಯಾಗಿ ನಿಭಾಯಿಸುವ ಕಲೆ ಕಲಿತಿರಬೇಕು ಎಂದು ನುಡಿದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಆಡಳಿತ ಮಂಡಳಿ ಬೆಳೆಯಲು ಕಾರಣ ಶಿಕ್ಷಕರು. ಎಲ್ಲರ ಒಗ್ಗಟ್ಟಿನಿಂದ ನಮ್ಮ ಸಂಸ್ಥೆ ಬೆಳೆದಿದೆ. ಕಾಳಜಿ ಮತ್ತು ಶ್ರಮ ವಹಿಸಿ ಕಾರ‍್ಯವನ್ನು ನಿರ್ವಹಿಸಿದ ಶಿಕ್ಷಕರೇ ಸಂಸ್ಥೆ ಹಲವು ಮೈಲಿಗಲ್ಲು ತಲುಪಲು ಕಾರಣ. ಸಂಸ್ಥೆಯನ್ನು ಇನ್ನಷ್ಟು ಬೆಳೆಯಲು ಸಹಕರಿಸಿ. ವಿದ್ಯಾರ್ಥಿಗಳನ್ನು ಸಂಸ್ಕಾರಯುತವಾಗಿ ಬೆಳೆಯುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.

ಎಂಪಿಇ ಸೊಸೈಟಿಯ ಸಮೂಹ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಿಶೇಷ ಸಾಧನೆಯನ್ನು ಮಾಡಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಪದವಿ ಕಾಲೇಜಿನ ಪ್ರಾಚಾರ‍್ಯ ಡಾ.ಡಿ.ಎಲ್. ಹೆಬ್ಬಾರ್ ಕೃತಜ್ಞತಾ ನುಡಿಗಳನ್ನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ‍್ಯ ಎಂ.ಎಚ್. ಭಟ್, ಕೇಂದ್ರೀಯ ವಿದ್ಯಾಲಯ ಪ್ರಾಚಾರ‍್ಯೆ ಡಾ.ವಿಜಯಲಕ್ಷ್ಮೀ ನಾಯ್ಕ, ಡಾ.ಎಂ.ಪಿ. ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆ್ಯಂಡ್‌ ರಿಸರ್ಚ್ ನಿರ್ದೇಶಕ ಡಾ.ಶಿವರಾಮ್ ಶಾಸ್ತ್ರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ವೇಳೆ ಎಂಪಿಇ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು ಕಾರ‍್ಯಕ್ರಮದಲ್ಲಿ ಇದ್ದರು.

ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಎಂಪಿಇ ಸೊಸೈಟಿ ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ಸ್ವಾಗತಿಸಿದರು. ಪ್ರಶಾಂತ್ ಹೆಗಡೆ ಪರಿಚಯಿಸಿದರು. ಕಾರ್ಯದರ್ಶಿ ಎಸ್.ಎಂ. ಭಟ್ ವಂದಿಸಿದರು. ಬಿಂದು ಅವಧಾನಿ, ಕೆ.ಆರ್.ಶ್ರೀಲತಾ ನಿರೂಪಿಸಿದರು. ಸಭಾ ಕಾರ‍್ಯಕ್ರಮಕ್ಕೂ ಮೊದಲು ಪದವಿ ಕಾಲೇಜಿನ ಆವಾರದಲ್ಲಿ ನಿರ್ಮಿಸಿರುವ ಶಾರದಾ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಸಭಾ ಕಾರ‍್ಯಕ್ರಮದ ನಂತರ ಉಪನ್ಯಾಸಕರಿಂದ ಮನರಂಜನಾ ಕಾರ‍್ಯಕ್ರಮ ಜರುಗಿತು.