ಸಾರಾಂಶ
ಕೊಪ್ಪಳ:
ಬೇಸಿಗೆ ತೀವ್ರತೆ ಹೆಚ್ಚಳವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು ತಹಸೀಲ್ದಾರ್ ವಿಠ್ಠಲ್ ಚೌಗಲೆ ಸೂಚಿಸಿದ್ದಾರೆ.ಬೇಸಿಗೆ ಪ್ರಾರಂಭ ಆಗಿರುವುದರಿಂದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಂಭವವಿದ್ದು, ಗ್ರಾಮೀಣ ಮತ್ತು ನಗರಕ್ಕೆ ಸಂಬಂಧಿಸಿದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನಚ್ಚೆರಿಕೆ ಕ್ರಮಕೈಗೊಳ್ಳಲು ಸೂಚಿಸಿದರು.ಕುಡಿಯಲು ಯೋಗ್ಯವಲ್ಲದ ಮೂಲಗಳಿಂದ ಬಂದ ನೀರನ್ನು ಸರಬರಾಜು ಮಾಡಬಾರದು ಮತ್ತು ಜನರಿಗೆ ಕುಡಿಯಲು ಬಳಸದಂತೆ ಜಾಗೃತಿ ಮೂಡಿಸಬೇಕು. ಪ್ರತಿ ವಾರ ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಮಟ್ಟದ ಕುಡಿಯುವ ನೀರಿನ ಮತ್ತು ಮೇವಿನ ಟಾಸ್ಕ್‌ಫೋರ್ಸ್ ಸಭೆ ಜರುಗಿಸಿ, ಅದರ ಪ್ರತಿಯನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಕುಡಿಯುವ ನೀರಿನ ಅಭಾವ ಬರದಂತೆ ಕ್ರಮವಹಿಸಲು ನಿರ್ದೇಶನ ನೀಡಿದರು. ಇಂದ್ರನಗರದಲ್ಲಿ ಹೊಸದಾಗಿ ಕಟ್ಟಿರುವ ಟ್ಯಾಂಕಿಗೆ ತ್ವರಿತವಾಗಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ನೆಲೋಗಿಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ತಾಲೂಕಿನ ಅಳವಂಡಿ, ಬೋಚನಹಳ್ಳಿ, ಕವಲೂರು, ಹಟ್ಟಿ ೪ ಗ್ರಾಮ ಪಂಚಾಯಿತಿಗಳ ೧೪ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ಒಂದು ವಾರದ ವರೆಗೆ ನದಿಯಲ್ಲಿರುವ ನೀರಿನ ಮೂಲಕ ಸರಬರಾಜು ಮಾಡಬಹುದಾಗಿದ್ದು, ನಂತರದ ವಾರದಿಂದ ಗ್ರಾಮ ಪಂಚಾಯಿತಿಗಳಿಗೆ ನೀರಿನ ಅಭಾವವಾಗಬಹುದು. ಈ ೪ ಪಂಚಾಯಿತಿಗಳು ಸರ್ಕಾರಿ ಬೋರ್‌ವೆಲ್ ಪರಿಶೀಲಿಸಿ ಸನ್ನದ್ದು ಮಾಡಿಕೊಳ್ಳಲು ಮತ್ತು ಮುನ್ನೆಚ್ಚರಿಕೆಯಾಗಿ ಖಾಸಗಿ ಬೋರ್‌ವೆಲ್ ಗುರುತಿಸಿ ಮಾಲಿಕರಿಂದ ಒಪ್ಪಂದ ಮಾಡಿಕೊಳ್ಳಲು ಹೇಳಿದರು.ಸಭೆಯಲ್ಲಿ ನಗರಸಭೆ ಅಧಿಕಾರಿಗಳು, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಉಪತಹಸೀಲ್ದಾರ್‌ರು, ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ತಾಲೂಕು ಪಂಚಾಯತಿ ಸಿಬ್ಬಂದಿ ಹಾಜರಿದ್ದರು.