ಸಾರಾಂಶ
ಪ್ರತಿಯೊಬ್ಬ ಮಹಿಳೆಯರನ್ನು ಕುಟುಂಬ ಸದಸ್ಯರಂತೆ ಕಾಣುವ ಮನೋಭಾವನೆ ಎಲ್ಲರಲ್ಲಿ ಮೂಡಿಬಂದಾಗ ಮಹಿಳೆ ನೆಮ್ಮದಿ ಜೀವನ ನಡೆಸಲು ಸಾಧ್ಯ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬ ಮಹಿಳೆಯರನ್ನು ಕುಟುಂಬ ಸದಸ್ಯರಂತೆ ಕಾಣುವ ಮನೋಭಾವನೆ ಎಲ್ಲರಲ್ಲಿ ಮೂಡಿಬಂದಾಗ ಮಹಿಳೆ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯೀಷಾಬಿ ಮಜೀದ್ ಹೇಳಿದರು.ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರನ್ನು ತಾತ್ಸಾರ ಮನೋಭಾವದಿಂದ ಕಾಣದೆ ಅವರನ್ನು ಸಹೋದರಿಯರಂತೆ ಕಾಣುವ ಮನಸ್ಸು ನಮ್ಮದಾಗಬೇಕು ಎಂದರು.
ಪುರಾತನ ಕಾಲದಿಂದಲೂ ಸಮಾಜದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನಮಾನವಿದೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸಿಮೀತರಾಗದೆ ಸ್ವಾವಲಂಬಿ ಬದುಕು ಸಾಗಿಸುವ ಛಲ ಇಟ್ಟುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾಳೆ. ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿ ಪುರುಷನ ಸರಿಸಮಳಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಮಹಿಳೆ ಎಂದೂ ಅಬಲೆಯಲ್ಲ, ಆಕೆ ಸಬಲೆಯಾಗಿದ್ದು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನ ಪಡೆಯಲು ಅರ್ಹಳಾಗಿದ್ದಾಳೆ. ನಮ್ಮ ತಾಯಿಯನ್ನು ಗೌರವಿಸುವಷ್ಟೇ ಇತರೆ ಹೆಣ್ಣು ಮಕ್ಕಳನ್ನು ಗೌರವಿಸುವ ಪದ್ಧತಿ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಹಿಳೆಯರಿಗೆ ಸುರಕ್ಷತೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಮಾತನಾಡಿ, ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ನಿಜಕ್ಕೂ ಸತ್ಯ. ಸಮಾಜದಲ್ಲಿ ಒಬ್ಬ ಮಹಿಳೆ ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಅಂತಹ ಮಹಿಳೆಯನ್ನು ಪೂಜಿಸುವುದು, ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.ವಕೀಲರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬೇಲೇರಿ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿ, ಮಹಿಳೆಯರು ಇನ್ನೂ ಹೆಚ್ಚು ಸಾಧನೆ ಮಾಡಲು ಇಂತಹ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ವೇದಿಕೆಯಾಗಿವೆ ಎಂದರು.
ಶಿರಸ್ತೇದಾರರಾದ ಲೋಕೇಶ, ವಸಂತ, ವಿರುಪಾಕ್ಷಿ ಕಲ್ಯಾಣಿ, ನಾಗನಗೌಡ ಪಾಟೀಲ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಉಮಾದೇವಿ ಪಾಟೀಲ, ವಿಮಲಾ ಶ್ರೀಪ್ರಸಾದ, ಸಾವಿತ್ರಿ ಬಳ್ಳಿನ್, ರಾಯವ್ವ ಗೌಡ್ರ, ಪ್ರಮೀಳಾ ಮಂಜಪ್ಪನವರ್, ಶೋಭಾ ಜಾಲಿಹಾಳ, ರಾಘವೇಂದ್ರ ಕೋಳಿಹಾಳ ಮತ್ತಿತರರಿದ್ದರು.