ಗುಳೆ ಹೋಗ್ಬೇಡಿ, ನಿಮ್ಮೂರಲ್ಲೇ ಕೆಲಸಾ ಮಾಡಿ: ಗರೀಮಾ ಪನ್ವಾರ್‌

| Published : Feb 16 2024, 01:50 AM IST

ಗುಳೆ ಹೋಗ್ಬೇಡಿ, ನಿಮ್ಮೂರಲ್ಲೇ ಕೆಲಸಾ ಮಾಡಿ: ಗರೀಮಾ ಪನ್ವಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬದುಕು ಅರಸಿ ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ ಗುಂಪು ಗುಂಪಾಗಿ ಗುಳೆ (ವಲಸೆ) ಹೊರಟ ಗ್ರಾಮೀಣರ ಮನವೊಲೈಕೆಗೆ ಮುಂದಾಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ್.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರ ಹಾಗೂ ಉದ್ಯೋಗದ ಅಭದ್ರತೆಯಿಂದ, ಬದುಕು ಅರಸಿ ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ ಗುಂಪು ಗುಂಪಾಗಿ ಗುಳೆ (ವಲಸೆ) ಹೊರಟ ಗ್ರಾಮೀಣರ ಮನವೊಲೈಕೆಗೆ ಮುಂದಾಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ್, ಯಾದಗಿರಿ ರೈಲು ನಿಲ್ದಾಣದ ಮೂಲಕ ಮಹಾನಗರಗಳಿಗೆ ಗುಳೆ ಹೊರಟವರ ಭೇಟಿಯಾಗಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವಂತೆ ತಿಳಿ ಹೇಳಿದರು.

ಮನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರ ಕುಟುಂಬಗಳಿಗೆ ಗ್ರಾಮ ಪಂಚಾಯಿತಿಗಳಿಂದ ಪ್ರತಿ ವರ್ಷ 100 ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ. ಹೀಗಾಗಿ, ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ಗುಳೆ (ವಲಸೆ) ಹೋಗದೆ, ನಿಮ್ಮೂರಲ್ಲೇ ಕೂಲಿ ಕೆಲಸ ಮಾಡಿ ಎಂದು ಗರೀಮಾ ಪನ್ವಾರ್‌ ಗುಳೆ ಹೋಗದಂತೆ ತಿಳಿಸಿದರು.

ಕೂಲಿ ಅರಸಿ ವಲಸೆ ಹೋಗುವ ಗ್ರಾಮೀಣ ಭಾಗದ ಕೃಷಿ ಕೂಲಿಕಾರರಿಗೆ ಮನರೇಗಾ ಯೋಜನೆಯಡಿ ಸಿಗುವ ನಾನಾ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಯಾದಗಿರಿ ರೈಲು ನಿಲ್ದಾಣದಲ್ಲಿ ತೆರೆದಿರುವ ನರೇಗಾ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಪನ್ವಾರ್‌, ವಲಸೆ ಹೊಗುವ ಕೂಲಿಕಾರೊಂದಿಗೆ ಸಮಾಲೋಚನೆ ಮಾಡಿ, ಮಾತನಾಡಿದರು.

ಪಟ್ಟಣ ಪ್ರದೇಶಕ್ಕೆ ಗೂಳೆ ಹೊರಟ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೆಲಸವಿಲ್ಲದ ಸಮಯದಲ್ಲಿ ನರೇಗಾ ಯೋಜನೆಯಲ್ಲೇ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.

ಮಕ್ಕಳ ಭವಿಷ್ಯ ಹಾಳಾಗುವುದು ಬೇಡ: ಪನ್ವಾರ್

ರೈತರು, ಕೂಲಿಕಾರರ ಮನೆಯಲ್ಲಿ ದನ, ಕುರಿ, ಹಂದಿ, ಕೋಳಿಗಳಿದ್ದರೆ, ನರೇಗಾ ಯೋಜನೆಯಡಿ ದನ ಕುರಿ ಕೋಳಿ ಹಾಗೂ ಹಂದಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಪಟ್ಟಣ ಪ್ರದೇಶಕ್ಕೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಅವರ ಉಜ್ವಲ ಭವಿಷ್ಯ ಹಾಳಾಗುತ್ತದೆ ಎಂದು ಪೋಷಕರಿಗೆ ಮನವರಿಕೆ ಮಾಡಿದರು.

ಯಾದಗಿರಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಮಾತನಾಡಿ, ರೈಲ್ವೆ ಸ್ಟೇಷನಲ್ಲಿ ಕೂಲಿ ಕೆಲಸಕ್ಕಾಗಿ ನಗರಗಳಿಗೆ ಗುಳೆ ಹೊರಟ ಕೂಲಿಕಾರರಿಗೆ ನರೇಗಾ ಯೋಜನೆಯ ಸೌಲಭ್ಯ ಪಡೆಯಲು ಜಾಬ್ ಕಾರ್ಡ್ ಇರಬೇಕು. ಜಾಬ್ ಕಾರ್ಡ್ ಇಲ್ಲದವರು ಕುಟುಂಬದ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಎರಡು ಫೋಟೊಗಳನ್ನು ಗ್ರಾಮ ಪಂಚಾಯಿತಿಗೆ ನೀಡಿದರೆ ಉಚಿತವಾಗಿ ಹೊಸ ಜಾಬ್ ಕಾರ್ಡ್ ನೀಡಲಾಗುವುದು ಎಂದರು.

ಶಹಾಪುರ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್ ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿದಿನಕ್ಕೆ ಪುರುಷ ಹಾಗೂ ಮಹಿಳೆಯರಿಗೆ 316 ರು.ಗಳು ಸಮಾನ ಕೂಲಿ ಇದೆ. ಒಂದು ಕುಟುಂಬ ನೂರು ದಿನ ಕೂಲಿ ಕೆಲಸ ಮಾಡಿದರೆ 31,600 ರು.ಗಳು ಕೂಲಿ ಹಣ ಗಳಿಸಬಹುದು. ಕೂಲಿ ಹಣ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದರು.

ಕೂಲಿ ಕೆಲಸವಲ್ಲದೆ ಕೃಷಿ ಜಮೀನು ಇದ್ದರೆ ಕ್ಷೇತ್ರ ಬದು, ಕೃಷಿ ಹೊಂಡ, ತೋಟಗಾರಿಕೆ ಬೆಳೆ ಪಪ್ಪಾಯ, ದಾಳಿಂಬೆ, ಸಪೋಟ, ನುಗ್ಗೆ, ಡ್ರಾಗನ್ ಫ್ರೂಟ್, ಹಾಗೂ ಇನ್ನಿತರ ಬೆಳೆಗಳ ಜೊತೆಗೆ ರೇಷ್ಮೆ ಬೆಳೆ ಬೆಳೆಯಲು ಇರುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈರುಳ್ಳಿ ಬೆಳೆಯುತ್ತಿದ್ದರೆ ಈರುಳ್ಳಿ ಸಂಗ್ರಹಣೆಗೆ ಈರುಳ್ಳಿ ಶೆಡ್ ಮಾಡಿಕೊಳ್ಳಬಹುದು ಎಂದು ಸುರಪುರ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರು ಮಾಹಿತಿ ನೀಡಿದರು.

ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ತಾಲೂಕು ಯೋಜನಾಧಿಕಾರಿ ಶಶಿಧರ ಹಿರೇಮಠ, ಸಹಾಯಕ ನಿರ್ದೇಶಕ ಮಲ್ಲಣ್ಣ, ವ್ಯವಸ್ಥಾಪಕ ಶಿವರಾಯ, ವಿಷಯ ನಿರ್ವಾಹಕ ಅನ್ಸರ್ ಪಟೇಲ್, ಜಿಲ್ಲಾ ಪಂಚಾಯ್ತಿ ನರೇಗಾ ಯೋಜನೆ ಸಂಯೋಜಕ ಪರಶುರಾಮ, ತಾಂತ್ರಿಕ ಸಂಯೋಜಕ ಉಮೇಶ್ ಸಂಯೋಜಕ ಭೀಮರೆಡ್ಡಿ ವಡಿಗೇರಾ, ಬಸಪ್ಪ, ತಾಂತ್ರಿಕ ಸಹಾಯಕರಾದ ವೆಂಕಟೇಶ, ನಾಗರಾಜ, ಶಶಿಕಾಂತ, ಶ್ರೀನಿವಾಸರೆಡ್ಡಿ ಇತರರಿದ್ದರು.