ಸಾರಾಂಶ
ಪ್ರಧಾನಿ ಮೋದಿ ಅವರ ಒಂಬತ್ತುವರೆ ವರ್ಷಗಳ ಆಡಳಿತ ಮಾದರಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಜತೆಗೆ ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ರಮಿಸದೆ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.ಇಲ್ಲಿನ ಅರವಿಂದ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಧಾರವಾಡ ಲೋಕಸಭೆಯ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಒಂಬತ್ತುವರೆ ವರ್ಷಗಳ ಆಡಳಿತ ಮಾದರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರ ಸಾಕಾರಕ್ಕೆ ಶ್ರಮಿಸಲಿವೆ ಎಂದು ತಿಳಿಸಿದರು.ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ ಮಾತನಾಡಿ, ಏಪ್ರಿಲ್ ಮೂರನೇ ವಾರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ಬಿಜೆಪಿ ನಾಯಕರು ಚುನಾವಣಾ ರೂಪುರೇಷೆ ಸಿದ್ಧಗೊಳಿಸಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರದ ಆಡಳಿತದಿಂದಾಗಿ ರಾಜ್ಯ ಸಂಪೂರ್ಣ ಆರ್ಥಿಕ ದಿವಾಳಿ ಆಗುವಂತಾಗಿದೆ. ಗ್ಯಾರಂಟಿ ಘೋಷಣೆ ಕೇವಲ ಕಾಟಾಚಾರಕ್ಕೆಂಬಂತಾಗಿವೆ ಎಂದು ಟೀಕಿಸಿದರು.ಇದೇ ವೇಳೆ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅವರನ್ನು ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಿ.ರಾಜೀವ್ ಘೋಷಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಲಿಂಗರಾಜ ಪಾಟೀಲ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ಸುತಗಟ್ಟಿ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ಶಶಿಮೌಳಿ ಕುಲಕರ್ಣಿ, ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ಜಯತೀರ್ಥ ಕಟ್ಟಿ, ಶಿವಾನಂದ ಗುಂಡಗೋವಿ ಇದ್ದರು.ಖಂಡನೀಯ
ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣವನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಳ್ಳದೇ ಮೊದಲು ಇಂಥ ಘಟನೆಗಳು ಆಗಿಲ್ಲವೇ? ಎಂದು ಪ್ರಶ್ನೆ ಮಾಡುತ್ತಿರುವುದು ಖಂಡನೀಯ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮತನವನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ಗಂಭೀರವಾದ ಘಟನೆ ಸಂಭವಿಸಿದರೂ ಕಾಂಗ್ರೆಸ್ ಸರಕಾರ ಕ್ಯಾರೆ ಅನ್ನುತ್ತಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಿ.ರಾಜೀವ ಎಚ್ಚರಿಸಿದರು.