ನದಿ ತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ

| Published : Aug 31 2025, 02:00 AM IST

ನದಿ ತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೃಕ್ಷಲಕ್ಷ ಆಂದೋಲನ ಸ್ವತಂತ್ರ ಪರಿಸರ ಪರಿಣಾಮ ವರದಿ ಪ್ರಕಟಿಸಿದೆ. ನದಿ ತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ ಎಂದು ಸರ್ಕಾರಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೃಕ್ಷಲಕ್ಷ ಆಂದೋಲನ ಸ್ವತಂತ್ರ ಪರಿಸರ ಪರಿಣಾಮ ವರದಿ ಪ್ರಕಟಿಸಿದೆ.

ಹಾವೇರಿ ಜಿಲ್ಲೆಗೆ ಯಲ್ಲಾಪುರದ ಬೇಡ್ತಿ ನದಿಯಿಂದ ಹಾಗೂ ಶಿರಸಿ ಶಾಲ್ಮಲಾ ನದಿಯಿಂದ ಚಾನಲ್ ಮೂಲಕ ನೀರು ಸಾಗಿಸುವ ಬೃಹತ್ ಬೇಡ್ತಿ-ವರದಾ ನದಿ ಜೊಡಣೆ ಯೋಜನೆ ಪುನಃ ಜೋರಾಗಿ ಸದ್ದು ಮಾಡುತ್ತಿದೆ. ಕಳೆದ ೨೫ ವರ್ಷಗಳಿಂದ ಮೂರು ಬಾರಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಜಿಲ್ಲೆಯ ಜನತೆ ಜನಾಂದೋಲನ ನಡೆಸಿದ್ದರಿಂದ ಯೋಜನೆಗೆ ತಡೆ ಬಿದ್ದಿತ್ತು. ಇದೀಗ ಪುನಃ ಹಾವೇರಿ ಜಿಲ್ಲೆ ರೈತರಿಗೆ ಬೇಡ್ತಿಯಿಂದ ನೀರು ತರುವ ಆಶ್ವಾಸನೆಯನ್ನು ಹಾವೇರಿಯ ರಾಜಕೀಯ ಮುಖಂಡರು ನೀಡುತ್ತಿದ್ದಾರೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ವಿವರ ಯೋಜನಾ ವರದಿ ಸಿದ್ಧಪಡಿಸುವ ತಯಾರಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ವರದಿ ಪ್ರಕಟಿಸಲಾಗಿದೆ.

ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸದಸ್ಯರಾಗಿದ್ದ ಡಾ. ಟಿ.ವಿ. ರಾಮಚಂದ್ರ, ಡಾ. ಕೇಶವ ಎಚ್. ಕೊರ್ಸೆ, ಶಾಂತಾರಾಮ ಸಿಧ್ಧಿ, ಬಿ.ಎಂ. ಕುಮಾರಸ್ವಾಮಿ, ವನ್ಯಜೀವಿ ಜಿಲ್ಲಾ ಗೌರವ ವಾರ್ಡನ್‌ ಆಗಿದ್ದ ಡಾ. ಬಾಲಚಂದ್ರ ಸಾಯಿಮನೆ, ಜೀವವೈವಿಧ್ಯ ಮಂಡಳಿಯ ಸದಸ್ಯರಾಗಿದ್ದ ಕೆ. ವೆಂಕಟೇಶ ಹಾಗೂ ಡಾ. ಪ್ರಕಾಶ, ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಪಾದ ಬಿಚ್ಚುಗುತ್ತಿ, ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ನಾರಾಯಣ ಗಡಿಕೈ, ಕರಾವಳಿ ಜೀವವೈವಿಧ್ಯ ತಜ್ಞ ಡಾ. ಸುಭಾಶ್ಚಂದ್ರನ್‌, ಡಾ.ವಿ.ಎನ್. ನಾಯ್ಕ, ಡಾ. ಮಹಾಬಲೇಶ್ವರ ಸ್ವತಂತ್ರ ಪರಿಸರ ಪರಿಣಾಮ ವರದಿ ಸಿಧ್ದಪಡಿಸಲು ಅಭಿಪ್ರಾಯ ನೀಡಿದ್ದಾರೆ.

ಬೇಡ್ತಿ-ವರದಾ ಯೋಜನೆ ಅವೈಜ್ಞಾನಿಕ ಪರಿಸರ ನಾಶಿ ಯೋಜನೆ, ಅವ್ಯವಹಾರಿಕ, ಪಶ್ಚಿಮ ಘಟ್ಟಕ್ಕೆ ಕಂಟಕ ತರಲಿದೆ. ನೀರಿಲ್ಲದ ನೀರಾವರಿ ಯೋಜನೆ ಪ್ರಸ್ತಾಪ ಇದು ಎಂದು ತಜ್ಞರು ವಿಮರ್ಶಿದ್ದಾರೆ. ಬೇಡ್ತಿಯಲ್ಲಿ ಹರಿಯುವ ನದಿ ನೀರಿನ ಮೇಲೆ ಯಲ್ಲಾಪುರ, ಶಿರಸಿ, ಅಂಕೋಲಾ ತಾಲೂಕುಗಳ 1.5 ಲಕ್ಷ ರೈತರು ಅವಲಂಬಿಸಿದ್ದಾರೆ. ಈ ವರೆಗೂ ಬೇಡ್ತಿ ಕಣಿವೆಯಲ್ಲಿ ಸರ್ಕಾರದ ನೀರಾವರಿ ಯೋಜನೆ ಇಲ್ಲ. ರೈತರೇ ಮುಂದಾಗಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿ ಮಲೆನಾಡಿನ ರೈತರ ನೀರಿನ ಬಳಕೆ ಹಕ್ಕಿನ ಪ್ರಶ್ನೆ ಗಂಭೀರದ್ದಾಗಿದೆ. ಶಿರಸಿ ತಾಲೂಕಿನ 6 ಗ್ರಾಪಂಗಳ 70 ಹಳ್ಳಿಗಳಲ್ಲಿ, ಯಲ್ಲಾಪುರದ 8 ಗ್ರಾಪಂಗಳ 80 ಹಳ್ಳಿಗಳು, ಮಾಗೋಡು ಜಲಪಾತ, ಅಂಕೋಲಾ ತಾಲೂಕಿನ 5 ಪಂಚಾಯಿತಿಗಳ 40 ಹಳ್ಳಿಗಳು ಬೇಡ್ತಿಕಣಿವೆ ನೀರನ್ನೆ ಅವಲಂಬಿಸಿವೆ. 40 ಸಾವಿರ ರೈತರ ಪಂಪ್‌ಸೆಟ್ಟುಗಳು ಇವೆ. ಶಿರಸಿ, ಯಲ್ಲಾಪುರ, ಮುಂಡಗೋಡ ಪಟ್ಟಣಗಳಿಗೆ ಕುಡಿಯುವ ನೀರಿನ ಯೋಜನೆ ಈ ನದಿ ಅವಲಂಬಿಸಿದೆ. ಜತೆಗೆ ಕಿರು ನೀರಾವರಿ ಇಲಾಖೆ ಶಾಲ್ಮಲಾ, ಪಟ್ಟಣದ ಹೊಳೆ, ಬೇಡ್ತಿ ಕಣಿವೆಯ ಹಳ್ಳಗಳಿಗೆ 15 ಸ್ಥಳಗಳಲ್ಲಿ ಕಿರು ನೀರಾವರಿ ಯೋಜನೆಗಳನ್ನು ಬಾಂದಾರ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಿದೆ. ನೌಕಾನೆಲೆ ಮತ್ತು ಕಾರವಾರಕ್ಕೆ 20 ವರ್ಷಗಳಿಂದ ಬೇಡ್ತಿ (ಗಂಗಾವಳಿ) ನದಿಯಿಂದ ಬೃಹತ್ ಪೈಪ್‌ಲೈನ್ ಮೂಲಕ ನೀರು ಸರಬರಾಜಾಗುತ್ತಿದೆ. ಇದೀಗ 2ನೇ ಹಂತದ ಕಾರವಾರ-ಅಂಕೋಲಾ-ನೌಕಾನೆಲೆ ಕುಡಿಯುವ ನೀರಿನ ಯೋಜನೆ ಜಾರಿ ಆಗುತ್ತಿದೆ.

ಈ ಮೇಲಿನ ಎಲ್ಲ ಅಂಶಗಳ ಮೂಲಕ ಬೇಡ್ತಿ ನದಿಯಿಂದ ನೀರನ್ನು ಸಾಗಿಸಲು ಸಾಧ್ಯವೇ ಇಲ್ಲ. ಮುಖ್ಯವಾಗಿ ಬೇಡ್ತಿಯಲ್ಲಿ ನೀರೇ ಇರುವುದಿಲ್ಲ ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಇದೇ ಕಾರಣಕ್ಕೆ ಬೇಡ್ತಿಯಿಂದ ಮುಂಡಗೋಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಫಲವಾಗಿದೆ. ಎತ್ತಿನ ಹೊಳೆ ತಿರುವು ಯೋಜನೆಯೂ ವಿಫಲವಾಗಿದೆ. ಹೀಗಾಗಿ ಪುನಃ ನದಿ ತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ ಎಂದು ಸರ್ಕಾರಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.