ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ನಾಗರಿಕರ ಅಹವಾಲುಗಳನ್ನು ಕಸದ ಬುಟ್ಟಿಗೆ ಹಾಕದೆ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕುಷ್ಟಗಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ನಾಗರಿಕರ ಅಹವಾಲುಗಳನ್ನು ಕಸದ ಬುಟ್ಟಿಗೆ ಹಾಕದೆ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಸ್ಪಂದನ ಕಾರ್ಯಕ್ರಮ ಕಾಟಾಚಾರಕ್ಕಾಗಿ ನಡೆಯಬಾರದು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನ ಕಾರ್ಯಕ್ರಮಗಳು ಸಹಕಾರಿ. ಸಲ್ಲಿಕೆಯಾದ ಅರ್ಜಿಗಳು ಬಹುತೇಕ ಮೂಲಭೂತ ಸೌಕರ್ಯದ ಸಮಸ್ಯೆಗಳಾಗಿದ್ದು, ಅಧಿಕಾರಿಗಳಿಗೆ ಇತ್ಯರ್ಥ ಪಡಿಸಲು ತಿಳಿಸಲಾಗಿದೆ. ಕಳೆದ ವರ್ಷ ಹನುಮನಾಳದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ 349 ಅರ್ಜಿಗಳು ವಿಲೇವಾರಿಯಾಗಿವೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಉಮಾದೇವಿ ಬಸಾಪುರು, ಪಿಎಸ್‌ಐ ಹನುಮಂತಪ್ಪ ತಳವಾರ ಹಾಜರಿದ್ದರು. ಕಂದಾಯ ಇಲಾಖೆ ಸಿಬ್ಬಂದಿ ಶರಣು ಹುಡೇದ ಕಾರ್ಯಕ್ರಮ ನಿರೂಪಿಸಿದರು.ಪುರಸಭೆಯಲ್ಲಿ ಹಣ ವಸೂಲಿ ನಿಯಂತ್ರಣಕ್ಕೆ ಕಡಿವಾಣ ಹಾಕಿ: ಅರ್ಜಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಕೊರತೆ ಹಾಗೂ ಸಿಬ್ಬಂದಿಯಿಂದ ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಅವರಿಗೆ ಸೂಚನೆ ನೀಡಿದರು. ಪುರಸಭೆಯಲ್ಲಿ ಹಣ ವಸೂಲಿ ಮಾಡುತ್ತಿರುವ ಕುರಿತು ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಅದನ್ನು ನಿಯಂತ್ರಣ ಮಾಡಬೇಕು. ಜನರಿಗೆ ಉತ್ತಮ ಸೇವೆ ಕೊಡಬೇಕು ಎಂದು ಹೇಳಿದರು.