ಸಾರಾಂಶ
ನನ್ನನ್ನು ಸಹ ನೋಡಿ ಆಶೀರ್ವದಿಸುತ್ತಿರುವುದು ನನಗೆ ದೊಡ್ಡ ಶಕ್ತಿ ಬರುವಂತೆ ಆಗಿದೆ.
ಕೊಟ್ಟೂರು: ಸಮಗ್ರ ವೀರಶೈವ ಲಿಂಗಾಯತ ಜನಾಂಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಯಾವುದೇ ಕಾರಣಕ್ಕೂ ಒಡಕು ಬರಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು .
ತಾಲೂಕಿನ ಉಜ್ಜಯನಿ ಸದ್ಧರ್ಮ ಪೀಠಕ್ಕೆ ಶುಕ್ರವಾರ ಮಧ್ಯಾಹ್ನ ಆಗಮಿಸಿ ಆರಾಧ್ಯ ದೇವ ಮರುಳಸಿದ್ದೇಶ್ವರ ಸ್ವಾಮಿ, ಗೌರಿ ಮಾತೆ ದರ್ಶನ ಪಡೆದು ನಂತರ ಜಗದ್ಗುರು ಸಿದ್ದಲಿಂಗ ರಾಜದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿಯಿಂದ ಆಶೀರ್ವಾದ ಪಡೆದು, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಕಲರನ್ನು ಒಪ್ಪಿಕೊಳ್ಳುವುದರ ಜೊತೆಗೆ ಸದಾ ಎಲ್ಲರಿಗೂ ಒಳಿತು ಮಾಡುತ್ತಾ ಬಂದಿರುವ ಸಮಾಜ ತಾನು ಪ್ರತಿಪಾದಿಸಿಕೊಂಡು ಬರುತ್ತಿರುವ ಅನ್ನ, ಅಕ್ಷರ ದಾಸೋಹ ಸೇವೆ ಮುಂದುವರೆಸಿಕೊಂಡು ಬರುತ್ತಿರುವುದು ಪ್ರತಿಯೊಬ್ಬರಿಗೂ, ಅದರಲ್ಲೂ ಸರ್ಕಾರಕ್ಕೆ ಮಾದರಿ ವಿಷಯ ಎಂದರು.ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಎಲ್ಲ ಸಮಾಜದ ಸ್ವಾಮೀಜಿಗಳು ಪ್ರೀತಿಯಿಂದ ನೋಡಿಕೊಂಡಂತೆ ನನ್ನನ್ನು ಸಹ ನೋಡಿ ಆಶೀರ್ವದಿಸುತ್ತಿರುವುದು ನನಗೆ ದೊಡ್ಡ ಶಕ್ತಿ ಬರುವಂತೆ ಆಗಿದೆ. ಯಾವುದೇ ಕಾರಣಕ್ಕೂ ಸಮಾಜ, ಜನತೆ, ಸ್ವಾಮೀಜಿಗಳು ತಮ್ಮ ಮೇಲೆ ಇರಿಸಿಕೊಂಡಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುವೆ ಎಂದರು.
ವಿಜಯೇಂದ್ರ ಅವರನ್ನು ಸನ್ಮಾನಿಸಿ ಮಾತನಾಡಿದ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು, ಉಜ್ವಲ ನಾಯಕತ್ವದ ಗುಣಗಳನ್ನು ಮೈಗೊಡಿಸಿಕೊಂಡಿರುವ ವಿಜಯೇಂದ್ರರಿಂದ ಸಮಾಜ ಬಹಳಷ್ಟು ನಿರೀಕ್ಷಿಸುತ್ತಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಸೂಚಿಸಿದರು.ಹೊಸ ವರ್ಷದ ಮೇ ತಿಂಗಳಲ್ಲಿ ನಡೆಯುವ ಉಜ್ಜಯನಿ ಮರಳುಸಿದ್ದಸ್ವಾಮಿ ರಥೋತ್ಸವ, ತೈಲ ಶಿಖರಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜಗದ್ಗುರು ಅವರನ್ನು ಆಮಂತ್ರಿಸಿದರು.
ಚಾನುಕೋಟಿ ಡಾ.ಸಿದ್ದಲಿಂಗ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕೂಡ್ಲಿಗಿ ಪ್ರಶಾಂತ ಸಾಗರ ಶಿವಾಚಾರ್ಯರು, ಕಾನಮಡಗ್ಗು ಶರಣಾರ್ಯರು, ಪುರತಗಿರಿ ಕೈಲಾಸನಾಥ ಶಿವಾಚಾರ್ಯರು ಇದ್ದರು.
ಮಾಜಿ ಸಚಿವರಾದ ಬಿ.ಶ್ರೀರಾಮುಲು, ಎಂ.ಪಿ. ರೇಣುಕಾಚಾರ್ಯ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ ಹರ್ಷವರ್ಧನ್, ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ, ಅಜಯಕುಮಾರ್, ಕಿಚಡಿ ಕೊಟ್ರೇಶ್, ಕೂಡ್ಲಿಗಿ ಮಂಡಲ ಅಧ್ಯಕ್ಷ ನಾಗರಾಜ ಕಾಮಶೆಟ್ಟಿ, ಗುಳಿಗೆ ವೀರೇಂದ್ರ , ಹೊಂಬಾಳೆ ರೇವಣ್ಣ ಎಂ.ಎಂ ಶೋಬಿತ್, ಬೂದಿ ಶಿವಕುಮಾರ್ ,ಎಂಜೆ ರುದ್ರಯ್ಯ, ಭರಮನಗೌಡ , ಅಂಗಡಿ ಪಂಪಾಪತಿ , ಜಿ ಸಿದ್ದಯ್ಯ , ಕೆಎಸ್ ವೀಣಾ ವಿವೇಕಾನಂದಗೌಡ, ಉಜ್ಜನಿ ಲೋಕೆಶ್, ಪಿ.ಎಚ್ ಕೊಟ್ರೇಶ್, ಕಾರ್ಯದರ್ಶಿ ವೀರೇಶ್, ಮರಳಸಿದ್ದಪ್ಪ ಇದ್ದರು.