ಸಾರಾಂಶ
ಚಿತ್ರದುರ್ಗ: ಹಣ, ಜಾತಿ, ಆಕರ್ಷಕ ಪ್ರಚಾರಕ್ಕೆ ಪ್ರಭಾವಿತರಾಗಿ ಮತ ಚಲಾಯಿಸಿದರೆ ಸಂವಿಧಾನ ಶಿಥಿಲವಾದರೆ ದೇಶದ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರಿಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಪ್ರತಿ ಮತವು ಸಂವಿಧಾನದ ಪರವಾಗಿ ಚಲಾವಣೆಯಾಗಬೇಕು ಎಂದು ಅಂಬೇಡ್ಕರ್
ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಧ್ಯಾನ ಕೇಂದ್ರದಲ್ಲಿ ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ವತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವದ ಭಾರತ ಕಟ್ಟುವುದಕ್ಕಾಗಿ ಸಂವಿಧಾನ ಎಂಬ ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಜಾರಿಯಾದ ದಿನ ಬಾಬಾ ಸಾಹೇಬ್ ಅವರು ಹೇಳಿದಂತೆ ಇನ್ನೂ ಮುಂದೆ ದೇಶವನ್ನಾಳುವ ರಾಜರು, ರಾಣಿ ಗರ್ಭದಿಂದ ಜನಿಸದೇ ಮತದಾನದ ಪೆಟ್ಟಿಗೆಯಿಂದ ಜನಿಸುತ್ತಾರೆ. ಅಂದು ರಾಣಿ ಗರ್ಭದಿಂದ ರಾಜ ಜನಿಸುವಾಗ ವಿದ್ಯೆ, ಸ್ವಾತಂತ್ರ‍್ಯ, ಸಮಾನತೆ ಇಲ್ಲದ ಕರಾಳ ಬದುಕಿನ ಸಮಾಜ ನಮ್ಮದಾಗಿತ್ತು. ಇಂದು ನಮ್ಮ ಕೈಯಲ್ಲಿರುವ ಮತವನ್ನು ಪ್ರಜ್ಞೆಯಿಂದ ಚಲಾಯಿಸದಿದ್ದರೆ ಮತ್ತೆ ನಿರಂಕುಶ ಪ್ರಭುಗಳೇ ಮತದಾನ ಪೆಟ್ಟಿಗೆಯಿಂದ ಜನಿಸುತ್ತಾರೆ ಎಂದರು.ಕುವೆಂಪು ವಿವಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ್ ಕೆಳಗಿನಮನಿ ಮಾತನಾಡಿ, ಜ್ಞಾನವೇ ನಿಜವಾದ ಶಕ್ತಿ. ಹಣ, ದೈಹಿಕ ಶಕ್ತಿಗಿಂತ ಜ್ಞಾನದ ಶಕ್ತಿ ಹೊಂದಿರುವವರು ಮಾತ್ರ ದೇಶ ಆಳಲು ಸಾಧ್ಯ. ಅಂಬೇಡ್ಕರ್ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತ. ಬಾಲ್ಯದಲ್ಲಿಯೇ ಅವಮಾನ ಹಾಗೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ವ್ಯಕ್ತಿ ತನ್ನ ಸಮಾಜವನ್ನು ಬಿಡುಗಡೆಗೊಳಿಸಲು ಜೀವನವನ್ನೇ ಮುಡುಪಾಗಿಟ್ಟ ಭಾರತದ ದೈತ್ಯಸೂರ್ಯ. ಕಾರ್ಲ್ ಮಾರ್ಕ್ಸ ಗಿಂತಲೂ ಹೆಚ್ಚಿನ ದೂರದೃಷ್ಟಿಯುಳ್ಳ ಆಲೋಚನೆ ಹೊಂದಿದ ವ್ಯಕ್ತಿ ಎಂದರು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತಕಾರ್ಯದರ್ಶಿ ರೇವಣ ಸಿದ್ದಪ್ಪ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪ್ರೊ.ಎಚ್.ಲಿಂಗಪ್ಪ,ನಿವೃತ್ತ ಡಿಡಿಪಿಯು ಬಿ.ಆರ್.ಶಿವಕುಮಾರ್, ಮಲ್ಲಾಡಿಹಳ್ಳಿ ಪ್ರಾಂಶುಪಾಲ ಸಿದ್ದಲಿಂಗಮ್ಮ, ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ, ಹಿರಿಯೂರು ಎಲ್‌ಐಸಿ ಮ್ಯಾನೇಜರ ಕೇಶವಮೂರ್ತಿ ಮಾತನಾಡಿದರು.
ಡಾ.ಸೋಮಕ್ಕ, ನಿವೃತ್ತ ಎಸ್.ಐ ನಾಗರಾಜ್, ಬಿ.ಎಸ್.ಐ ಪ್ರಧಾನಕಾರ್ಯದರ್ಶಿ ಶಕುಂತಲಾ, ಪ್ರಾಂಶುಪಾಲ ದುರ್ಗೇಶಪ್ಪ, ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಉಪನ್ಯಾಸಕರಾದ ಡಾ.ಗುರುನಾಥ್, ಡಾ.ಕೆರೆಯಾಗನಹಳ್ಳಿ ತಿಪ್ಪೇಸ್ವಾಮಿ, ಈ.ನಾಗೇಂದ್ರಪ್ಪ, ಭೀಮ್ ಆರ್ಮಿ ಅಧ್ಯಕ್ಷ ಅವಿನಾಶ್, ನೀತಿಗೆರೆ ಮಂಜಪ್ಪ, ಭೀಮನಕೆರೆ ಶಿವಮೂರ್ತಿ, ಬೆಸ್ಕಾಂ ತಿಪ್ಪೇಸ್ವಾಮಿ, ಬುರುಜನರೊಪ್ಪ ಹನುಮಂತಪ್ಪ ಇತರರಿದ್ದರು.