ಸಾರಾಂಶ
ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದಂತೆ ಸರ್ಕಾರ ಬಂದ ಒಂದೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತು.
ಹೊಸಪೇಟೆ: 2014ರಲ್ಲಿ ನಂಬಿ ಮತ ಕೊಟ್ಟ ಜನರಿಗೆ ಒಳ್ಳೆ ದಿನ ಬಂತಾ? ಪ್ರಧಾನಿಗೆ ಮಾತ್ರ ಒಳ್ಳೆ ದಿನ ಬಂದಿದೆ. ನಮಗೆ ನಿಮ್ಮ ಒಳ್ಳೆಯ ದಿನ ಬೇಡ ಸ್ವಾಮಿ, ನಮ್ಮ ಹಳೇ ದಿನಗಳನ್ನೇ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬುಧವಾರ ಇಲ್ಲಿ ವಿಜಯನಗರ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ಲೀಟರ್‌ಗೆ ₹53 ಇತ್ತು. ಈಗ ನೂರು ರು. ದಾಟಿದೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಯಾವದರಲ್ಲಿ ಒಳ್ಳೆಯದಾಗಿದೆ ? ಎಂದು ಪ್ರಶ್ನಿಸಿದರು.ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದಂತೆ ಸರ್ಕಾರ ಬಂದ ಒಂದೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತು. ನಮ್ಮ ಕಳೆದ ಅವಧಿಯಲ್ಲಿ 1,80,353 ಮನೆಗಳು ಮಂಜೂರು ಮಾಡಲಾಗಿತ್ತು. ಆದರೆ, ನಂತರ ಬಂದವರಿಗೆ ಒಂದೂ ಮನೆ ಕೊಡಲು ಆಗಿಲ್ಲ. ₹7400 ಕೋಟಿಯಲ್ಲಿ ಕೇವಲ ₹310 ಕೋಟಿ ಕೊಟ್ಟಿದ್ದಾರೆ. ಬಡವರ ಬಗ್ಗೆ ಕಾಳಜಿ ಇದ್ದಿದ್ದರೆ ಆಗಿನ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಬೇಕಿತ್ತು. ಅವರಿಗೆ ಕಾಳಜಿ ಇಲ್ಲ ಎಂದರು.
ಈಗ ಐದು ಗ್ಯಾರಂಟಿಗಳ ಜೊತೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇನ್ನು 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಬಡ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಹಾಗೂ ರೈತರ ಸಾಲಮನ್ನಾ ಮಾಡಲಾಗುವುದು. ನಮ್ಮ ಗ್ಯಾರಂಟಿಗಳನ್ನು ಜನ ನಂಬುತ್ತಾರೆ ಎಂದರು.