ಸಿ.ಪಿ.ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಾಗುವುದಾಗಿ ಬಂದಿದ್ದು ಸತ್ಯ.  ಈ ಬಗ್ಗೆ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವುದಾಗಿ ಬಂದಿದ್ದು ಸತ್ಯ. ರಾಜಕೀಯಕ್ಕಾಗಿ ತಂದೆ ಹಾಗೂ ಮಗಳನ್ನು ದೂರ ಮಾಡಿದ ಅಪವಾದ ನಮಗೆ ಬೇಡ. ಹೀಗಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

ಇದೇ ವೇಳೆ, ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದೂ ತಿಳಿಸಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ-ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ ಎಂದರು.

ಸ್ಥಳೀಯ ನಾಯಕರೊಂದಿಗೆ ಚರ್ಚಿಸುತ್ತೇವೆ- ಡಿಕೆಶಿ:

ಅವರೇ ಪಕ್ಷ ಸೇರಲು ಸಿದ್ಧರಿದ್ದಾರಲ್ಲ ಎಂಬ ಪ್ರಶ್ನೆಗೆ, ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದರು.