ಮರಳು ಮತ್ತು ಮಣ್ಣು ಕದಿಯುವುದು ಗೊತ್ತಾಗುವುದಿಲ್ಲಾ ಅಂದ್ರೆ ಹೇಗೆ? ಸುಳಿವು ಸಿಗದಂತೆ ಕದಿಯಲು ಅದೇನು ಬಂಗಾರವಾ? ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸರ್ಕಾರದ ಜಾಗದಲ್ಲಿನ ಮಣ್ಣು ಸಾಗಾಟ ಆಗುತ್ತಿದ್ದರೂ ಏಕೆ ಮೌನ ವಹಿಸಿದ್ದೀರಿ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಹಾವೇರಿ: ಮರಳು ಮತ್ತು ಮಣ್ಣು ಕದಿಯುವುದು ಗೊತ್ತಾಗುವುದಿಲ್ಲಾ ಅಂದ್ರೆ ಹೇಗೆ? ಸುಳಿವು ಸಿಗದಂತೆ ಕದಿಯಲು ಅದೇನು ಬಂಗಾರವಾ? ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸರ್ಕಾರದ ಜಾಗದಲ್ಲಿನ ಮಣ್ಣು ಸಾಗಾಟ ಆಗುತ್ತಿದ್ದರೂ ಏಕೆ ಮೌನ ವಹಿಸಿದ್ದೀರಿ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಇಲ್ಲಿಗೆ ಸಮೀಪದ ಕೋಳೂರು - ಗಣಜೂರು ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಮಣ್ಣು ಅಗೆದು ಸಾಗಾಟ ಮಾಡಿದ ಪ್ರದೇಶ ವೀಕ್ಷಿಸಿದ ಸಚಿವರು, ದೊಡ್ಡ ಪ್ರಮಾಣದಲ್ಲಿ ಮಣ್ಣು ಸಾಗಾಟವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ನೋಟಿಸ್‌ ನೀಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಖಚಿತ ಮಾಹಿತಿ ಪಡೆದುಕೊಂಡ ನಂತರವೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ಸಾಲುಗಟ್ಟಿ ವಾಹನಗಳಲ್ಲಿ ಮಣ್ಣು ಮತ್ತು ಮರಳು ಸಾಗಾಟ ಮಾಡಲಾಗುತ್ತಿರುವ ಫೋಟೋ, ವಿಡಿಯೋಗಳು ಇವೆ. ತೋರಿಸಬೇಕಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ನಿಮಗೆ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿದ್ದೀರಿ ಎಂದರೆ ಏನರ್ಥ ಎಂದರು.

ಕೆಐಎಡಿಬಿ ಅಧಿಕಾರಿಗಳಿಗೂ ಜವಾಬ್ದಾರಿ ಇರಬೇಕು. ಈ ಭೂಮಿಯ ಮಾಲೀಕತ್ವ ಪಡೆದ ನಂತರ ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ಸುಮ್ಮನೆ ಇದ್ದೀರಾ? ಎಷ್ಟು ಬಾರಿ ಮೀಟಿಂಗ್‌ ಮಾಡಿದ್ದೇವೆ. ಆದರೂ ಗಮನಕ್ಕೆ ತಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌ ಹೇಳಿದರು.

ಮಣ್ಣು, ಮರಳು ಕಳ್ಳರು ಸರ್ಕಾರಕ್ಕೆ ಬೆದರಿಕೆ ಹಾಕುವ ಮಟ್ದಕ್ಕೆ ಬೆಳೆದಿದ್ದಾರಾ? ಎಂದು ಪ್ರಶ್ನಿಸಿದ ಸಚಿವರು, ಕೈಗಾರಿಕಾ ಪ್ರದೇಶದಲ್ಲಿ ಸಶಸ್ತ್ರ ಸಿಬ್ಬಂದಿ ನಿಯೋಜನೆ ಮಾಡಿ ಎಂದು ಸೂಚಿಸಿದರು.

ಗನ್‌ ಲೈಸೆನ್ಸ್‌ ಹೊಂದಿರುವ ಸೇನೆಯ ಸಿಬ್ಬಂದಿಯನ್ನು ನೇಮಕ ಮಾಡುವುದು ಸೂಕ್ತ. ರಾತ್ರಿ ಗಸ್ತು ಸೇರಿದಂತೆ ಇತರೆಡೆ ಅಧಿಕಾರಿಗಳು ಸಿಬ್ಬಂದಿ ನಿಯೋಜನೆ ಮಾಡಬೇಕಿದ್ದು, ಕೈಗಾರಿಕಾ ಪ್ರದೇಶಕ್ಕೆ ಸೆಕ್ಯುರಿಟಿ ಕರ್ತವ್ಯಕ್ಕೆ ನೇಮಕ ಮಾಡುವಷ್ಟು ಸಿಬ್ಬಂದಿ ಪೊಲೀಸ್‌ ಇಲಾಖೆಯಲ್ಲಿ ಇಲ್ಲ ಎಂದು ಎಸ್ಪಿ ಯಶೋದಾ ವಂಟಿಗೋಡಿ ಹೇಳಿದರು.

ಅಕ್ರಮ ಮರಳು ಮತ್ತು ಮಣ್ಣು ಸಾಗಾಟವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಇಂತಹ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಸಚಿವರು ಹೇಳಿದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ ನೇರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸಗೆಣ್ಣಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ಜಿಪಂ ಸಿಇಒ ರುಚಿ ಬಿಂದಲ್‌, ಎಸ್ಪಿ ಯಶೋಧಾ ವಂಟಿಗೋಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ಕರೆಯಲು ಸೂಚನೆ: ಅರಣ್ಯ ಇಲಾಖೆ ಸಮಸ್ಯೆ ಕಾರಣದಿಂದ ಕೋಳೂರು ಗಣಜೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಫೆ. 12ರಂದು ಹಾವೇರಿಯಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಸಭೆಗೆ ವ್ಯವಸ್ಥೆ ಮಾಡಿ ಎಂದು ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಕೋಳೂರು - ಗಣಜೂರು ಕೈಗಾರಿಕಾ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಸಚಿವರು, ಕೆಡಿಪಿ ಸಭೆಯಲ್ಲಿ ಒಮ್ಮೆಯೂ ಈ ವಿಷಯ ಪ್ರಸ್ತಾಪಕ್ಕೆ ಬಂದಿಲ್ಲ. ಮುಂದಿನ ಕೆಡಿಪಿ ಸಭೆಗೆ ಈ ವಿಷಯ ತನ್ನಿ ಎಂದು ಸೂಚಿಸಿದರು.