ಶೀಘ್ರವೇ ಮನೆ ಮನೆಗೆ ಪುಟ್ಟರಾಜರ ಪುಸ್ತಕ ಅಭಿಯಾನ

| Published : May 13 2024, 12:00 AM IST

ಸಾರಾಂಶ

ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾವಿರದ ಸಾಹಿತ್ಯ ಪುಸ್ತಕಗಳನ್ನು ಸಾವಿರ ಸಾವಿರ ಮನೆಗಳಿಗೆ ತಲುಪಿಸುವ ಅಭಿಯಾನವನ್ನು ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಹಮ್ಮಿಕೊಂಡಿದೆ ಎಂದು ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಕಡಣಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಮಾವೇಶದಲ್ಲಿ ಚನ್ನವೀರಸ್ವಾಮಿ ಹಿರೇಮಠ ಕಡಣಿ ಹೇಳಿಕೆ । ಗವಾಯಿಗಳ ಸಾಧನೆ ಜನರಿಗೆ ತಿಳಿಸುವ ಉದ್ದೇಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾವಿರದ ಸಾಹಿತ್ಯ ಪುಸ್ತಕಗಳನ್ನು ಸಾವಿರ ಸಾವಿರ ಮನೆಗಳಿಗೆ ತಲುಪಿಸುವ ಅಭಿಯಾನವನ್ನು ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಹಮ್ಮಿಕೊಂಡಿದೆ ಎಂದು ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಕಡಣಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಗದಗಿನ ಡಾ.ಪಂಡಿತ ಪುಟ್ಟರಾಜ ಸಮಿತಿ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳ ಅಭಿಮಾನಿ ಸಮಾವೇಶ, ರಾಜ್ಯಮಟ್ಟದ ಕವಿಗೋಷ್ಟಿ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವಿರಾರು ಅಂಧ ಮಕ್ಕಳ ಬಾಳಿಗೆ ಬೆಳಕಾದ ಪುಟ್ಟರಾಜ ಗವಾಯಿಗಳ ಕೊಡುಗೆ, ಸಾಧನೆಯನ್ನು ಮತ್ತಷ್ಟು ಬೆಳಗಿಸಲು ಸಮಿತಿ ಅಭಿಯಾನ ಕೈಗೊಳ್ಳುತ್ತಿದೆ ಎಂದರು.

ರಾಜ್ಯಾದ್ಯಂತ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಮಹಿಳಾ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ಪದಾಧಿಕಾರಿಗಳು ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ಮಹಿಮೆ ಮತ್ತಷ್ಟು ಜನರಿಗೆ ಮುಟ್ಟಿಸುವ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಗವಾಯಿಗಳ ಸಾವಿರದ ಸಾಹಿತ್ಯದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ಸಮಾಜ ಸೇವಕಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ಲಿಂಗೈಕ್ಯ ಪುಟ್ಟರಾಜ ಗವಾಯಿಗಳನ್ನು ತೀರಾ ಹತ್ತಿರದಿಂದ ನೋಡಿದ್ದು, ತಮ್ಮ ಕಿರುವಾಡಿ ಮನೆತನವಾಗಿದ್ದು, ತಮ್ಮ ಮನೆಗೆ ಪೂಜೆಗೆ ಬರುತ್ತಿದ್ದರು. ಗವಾಯಿಗಳ ಪೂಜೆಯನ್ನು ಮುಂದೆ ಕುಳಿತು ನೋಡುವುದೇ ಕಣ್ಣಿಗೊಂದು ಹಬ್ಬ. ದೈವಾಂಶ ಸಂಭೂತರೇ ನಮ್ಮ ಮನೆಗೆ ಬಂದು ಪೂಜೆ ಮಾಡಿದಂತೆ ನಮಗೆಲ್ಲರಿಗೂ ಭಾಸವಾಗುತ್ತಿತ್ತು ಎಂದು ಸ್ಮರಿಸಿದರು.

ದಾವಣಗೆರೆಯಲ್ಲಿ ಪುಟ್ಟರಾಜ ಗವಾಯಿಗಳ ಭಕ್ತರು, ಆರಾಧಕರು ಅಪಾರ ಸಂಖ್ಯೆಯಲ್ಲಿದ್ದಾರೆ. ಲಿಂಗೈಕ್ಯ ಗವಾಯಿಗಳು ಸ್ವತಃ ಅಂಧರಾಗಿದ್ದರೂ ಸಾವಿರಾರು ಅಂಧ, ಅನಾಥ ಮಕ್ಕಳ ಪಾಲಿಗೆ ಬೆಳಕಾಗಿದ್ದಾರೆ. ನಗರದ ಹೊರವಲಯದ ಬಾಡಾ ಕ್ರಾಸ್ ನಲ್ಲಿ ಗದಗಿನ ಮಾದರಿಯಲ್ಲಿ ವೀರೇಶ್ವರ ಪುಣ್ಯಾಶ್ರಮವಿದೆ. ರಾಜ್ಯದ ವಿವಿಧೆಡೆಯಿಂದ ಅಂಧ, ಅನಾಥ ಮಕ್ಕಳಿಗೆ ಬದುಕು, ಭವಿಷ್ಯ ಕಟ್ಟಿಕೊಡುವ ಕೆಲಸವಾಗುತ್ತಿದೆ ಎಂದು ಗವಾಯಿಗಳ ಆದರ್ಶ ಪಾಲನೆ ಶ್ಲಾಘಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಪಿ.ಬಿ.ವಿನಾಯಕ ಮಾತನಾಡಿ, ಪುಟ್ಟರಾಜ ಗವಾಯಿಗಳ ಬಗ್ಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಸಮಿತಿಯಿಂದ ನಿರಂತರ ನಡೆಯಬೇಕಿದೆ. ಇಂತಹ ಕಾರ್ಯಕ್ರಮಕ್ಕೆ ಆರ್ಥಿಕ ಬೆಂಬಲಕ್ಕಿಂತಲೂ ಮಾನಸಿಕ ಬೆಂಬಲ ಅಗತ್ಯವಾಗಿ ಜನರಿಂದ ಬೇಕು. ಮುಂದಿನ ದಿನಗಳಲ್ಲಿ ಸಮಿತಿಯಿಂದ ಪುಟ್ಟರಾಜ ಗವಾಯಿಗಳ ಕುರಿತಂತೆ ಮತ್ತಷ್ಟು ಕಾರ್ಯಕ್ರಮ ಆಯೋಜಿಸುವ ಆಲೋಚನೆ ಇದೆ ಎಂದರು.

ಸಮಿತಿ ಜಿಲ್ಲಾ ಗೌರಾವಾಧ್ಯಕ್ಷ ಅಣಬೇರು ಮಂಜಣ್ಣ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ.ಪರಮೇಶಪ್ಪ, ಶಿವಬಸಯ್ಯ ಚರಂತಿಮಠದ ಇತರರು ಇದ್ದರು. ಅನಂತರ ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಕೊಟ್ರಯ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಅನಂತರ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು.

- - -

ಬಾಕ್ಸ್‌ ಗವಾಯಿಗಳ ಕಾರ್ಯಕ್ರಮಕ್ಕೆ ಬಂದಿದ್ದು ನನ್ನ ಪುಣ್ಯ ಪುಟ್ಟರಾಜ ಗವಾಯಿಗಳ ಕಾರ್ಯಕ್ರಮಕ್ಕೆ ನಾನು ಬಂದಿರುವುದು ನನ್ನ ಪುಣ್ಯವೆಂದುಕೊಂಡಿದ್ದೇನೆ. ಗವಾಯಿಗಳಿಗೆ ಸಂಗೀತದ ಜೊತೆಗೆ ಅಗಾಧವಾದ ಜ್ಞಾನ ಸಂಪತ್ತು ಇತ್ತು. ಗವಾಯಿಗಳ ಸಂಗೀತ ಕೇಳುತ್ತಿದ್ದರೆ ಮನಸ್ಸಿಗೆ ಮುದ ನೀಡುತ್ತಿತ್ತು. ಪುಟ್ಟರಾಜರ ಮಾತುಗಳು ಶಾಂತಿ, ನೆಮ್ಮದಿಯುತ ಬದುಕಿಗೆ ದಾರಿದೀಪವಾಗಿರುತ್ತಿದ್ದವು. ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಮತ್ತಷ್ಟು ಬೆಳೆಯಬೇಕು. ಸಮಿತಿ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ಕಿರುವಾಡಿ ಗಿರಿಜಮ್ಮ ಭರವಸೆ ನೀಡಿದರು.

- - --12ಕೆಡಿವಿಜಿ1, 2:

ದಾವಣಗೆರೆಯಲ್ಲಿ ಭಾನುವಾರ ಪುಟ್ಟರಾಜ ಗವಾಯಿಗಳ ಅಭಿಮಾನಿ ಸಮಾವೇಶ, ಸಂಗೀತ, ನೃತ್ಯ ಕಾರ್ಯಕ್ರಮವನ್ನು ಚನ್ನವೀರಸ್ವಾಮಿ ಹಿರೇಮಠ ಕಡಣಿ ಉದ್ಘಾಟಿಸಿದರು. ಕಿರುವಾಡಿ ಗಿರಿಜಮ್ಮ, ಅಣಬೇರು ಮಂಜಣ್ಣ ಇನ್ನಿತರ ಗಣ್ಯರು ಇದ್ದರು.