ಸಾರಾಂಶ
ಬಳ್ಳಾರಿ: ರೈತರು ತಮ್ಮ ಜಮೀನುಗಳನ್ನು ಪೌತಿ ಮಾಡಿಸಿಕೊಳ್ಳಲು ಇನ್ಮುಂದೆ ಕಂದಾಯ ಇಲಾಖೆ ಕಚೇರಿವರೆಗೂ ಅಲೆಯಬೇಕಿಲ್ಲ. ಸರ್ಕಾರವೇ ಇ-ಪೌತಿ ಆಂದೋಲನದ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಈ ಹಿಂದಿನಿಂದಲೂ ಅಭಿಯಾನಗಳು ನಡೆದಿವೆ. ಹೋಬಳಿ, ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆದಿವೆ. ಆದರೂ ಇನ್ನು ಕೆಲವು ಪ್ರಕರಣ ಬಾಕಿ ಇದ್ದು, ಕಂದಾಯ ಇಲಾಖೆ ಸಚಿವರ ನಿರ್ದೇಶನದ ಮೇರೆಗೆ ಮನೆ ಬಾಗಿಲಿಗೆ ಕಂದಾಯ ಸೇವೆಗಳ ‘ಇ-ಪೌತಿ’ ಆಂದೋಲನ ಆರಂಭಿಸಲಾಗಿದೆ.ಈ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ, ವಾರಸುದಾರರಿಗೆ ಮೊಬೈಲ್ ಮೂಲಕ ಪೌತಿ ಖಾತೆಯನ್ನು ನೋಂದಾಯಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಸೀಡಿಂಗ್‌ನ ಮೂಲಕ ಭೂಮಿ ಹಿಡುವಳಿಯ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟ 75,000 ಜಮೀನುಗಳ ಮಾಲೀಕರ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಇ-ಪೌತಿ ಆಂದೋಲನವನ್ನು ಆರಂಭಿಸಿದೆ. ಆಧಾರ್ ಜೋಡಣೆಯಿಂದ ಕೃಷಿ ಭೂಮಿಯ ಪ್ರಮಾಣ, ರೈತರ ಭೂ ಹಿಡುವಳಿ, ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆಯ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯವಾಗಲಿವೆ ಎಂದಿದ್ದಾರೆ.ಸರ್ಕಾರಿ ಸೌಲಭ್ಯ ಸಿಗಲ್ಲ: ಮೃತಪಟ್ಟ ರೈತರ ಹೆಸರಿನಲ್ಲಿರುವ ಜಮೀನು ಇ-ಪೌತಿ ಮಾಡಿಸಿಕೊಳ್ಳದೇ ಹಾಗೆಯೇ ಬಿಟ್ಟರೆ ಆ ಕುಟುಂಬ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಲಿದೆ. ಪಿಎಂ ಕಿಸಾನ್ ಸಮ್ಮಾನ, ಫಸಲ್ ವಿಮಾ ಯೋಜನೆ ಸೇರಿ ಹಲವು ಸರ್ಕಾರಿ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಕುಟುಂಬದ ವಾರಸುದಾರರು ಇ-ಪೌತಿ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಜಮೀನನ್ನು ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಿಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.