ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ದೇಶ ಸುರಕ್ಷತೆ

| Published : Jul 19 2025, 01:00 AM IST

ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ದೇಶ ಸುರಕ್ಷತೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಸುರಕ್ಷತೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಜನರಲ್ಲಿ ಭದ್ರತೆ, ವಿಶ್ವಾಸ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದ್ದಾರೆ.

- ಹದಡಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾರ್ವಜನಿಕರ ಸುರಕ್ಷತೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಜನರಲ್ಲಿ ಭದ್ರತೆ, ವಿಶ್ವಾಸ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.

ತಾಲೂಕಿನ ಹದಡಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಪೊಲೀಸ್ ಇಲಾಖೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೇ, ಶಾಂತಿ, ಭದ್ರತೆ ರೂವಾರಿಯೂ ಆಗಿದೆ ಎಂದರು.

ಅಪರಾಧಗಳ ತಡೆ-ಪತ್ತೆ, ಸಾರ್ವಜನಿಕ ಸಭೆಗಳಿಗೆ ಭದ್ರತೆ, ಪ್ರವಾಹ, ಭೂಕಂಪ, ಮಹಾಮಾರಿ ಮತ್ತಿತರೆ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾತ್ಮಕ ಕಾರ್ಯಗಳಲ್ಲಿ ತೊಡಗುವುದು ಇಲಾಖೆ ಪ್ರಮುಖ ಕರ್ತವ್ಯವಾಗಿವೆ. ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸ ಮೂಡಿಸುವುದು ಇಲಾಖೆ ಆದ್ಯತೆ ಎಂದು ವಿವರಿಸಿದರು.

ಸಮುದಾಯ ಪೊಲೀಸ್ ವ್ಯವಸ್ಥೆಗೆ ಇಲಾಖೆ ಒತ್ತು ನೀಡಿದೆ. ಸೈಬರ್ ಅಪರಾಧ, ಮಹಿಳೆಯರು, ಮಕ್ಕಳ ವಿರುದ್ಧದ ಅಪರಾಧ ತಡೆಯಲು ಹಗಲಿರುಳು ಶ್ರಮಿಸುತ್ತಿದೆ. ಸಾರ್ವಜನಿಕರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು, ಪೌರ ಸಹಭಾಗಿತ್ವದ ಕಾರ್ಯಕ್ರಮ ರೂಪಿಸುವಲ್ಲಿ ಇಲಾಖೆ ಪ್ರಗತಿಪರ ನಿಲುವುಗಳನ್ನು ಕೈಗೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಪೊಲೀಸ್ ಇಲಾಖೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಎಎಸ್‌ಪಿ ಜಿ.ಮಂಜುನಾಥ, ಮಾಯಕೊಂಡ ವೃತ್ತ ನಿರೀಕ್ಷಕ ರಾಘವೇಂದ್ರ, ಹದಡಿ ಠಾಣೆ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ, ಶಕುಂತಲಾ, ಹದಡಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಬಸವರಾಜ, ಮುಖಂಡರಾದ ಹದಡಿ ಜಿ.ಸಿ.ನಿಂಗಪ್ಪ, ಹದಡಿ ಹಾಲಪ್ಪ, ಗ್ರಾಮದ ಮುಖಂಡರು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸಾರ್ವಜನಿಕರು, ಠಾಣೆ ಸಿಬ್ಬಂದಿ ಇದ್ದರು.

- - -

(ಬಾಕ್ಸ್‌) * ಪೊಲೀಸ್ ಅಂದರೆ ಭಯವಲ್ಲ, ಭರವಸೆ

ಪೊಲೀಸ್ ಅಂದರೆ ಭಯವಲ್ಲ, ಭರವಸೆ ಎಂಬ ವಿಶ್ವಾಸವಿದ್ದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಹೊಸ ಯೋಜನೆಯಡಿ ಪ್ರತಿ ದಿನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜನರೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕ್ರಮ ಕೈಗೊಳ್ಳುತ್ತಾರೆ. ಮಾದಕ ವಸ್ತು ಬಳಕೆ ಜಾಗತಿಕ ಸಮಸ್ಯೆಯಾಗಿದೆ. ಇಂದು ಲಕ್ಷಾಂತರ ಜನರು ಇಂತಹ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಮಾದಕ ವ್ಯಸನಮುಕ್ತ ಜಗತ್ತನ್ನು ನಿರ್ಮಾಣ ಮಾಡುವಲ್ಲಿ ಜನರ ಸಹಕಾರ ಅತ್ಯಗತ್ಯ ಎಂದರು. ಶಾಲಾ- ಕಾಲೇಜುಗಳಲ್ಲಿ ಜಾಗೃತಿ, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರ, ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆ ನಡೆಸಲಾಗುವುದು. ಪ್ರತಿ ಠಾಣೆ ವ್ಯಾಪ್ತಿಯ 40-50 ಮನೆಗಳ ಸಮೂಹ ರಚಿಸಿ, ಇ-ಬೀಟ್ ವ್ಯವಸ್ಥೆ ಅನ್ವಯ ಅಂತಹ ಮನೆಗಳ ಸಹಮತಿಯೊಂದಿಗೆ ಆ ಸಮೂಹದೊಳಗೆ ವಾಸಿಸುವ ಓರ್ವ ಜವಾಬ್ಧಾರಿಯುತ ವ್ಯಕ್ತಿಯನ್ನು ಸಮೂಹದ ಮುಖ್ಯಸ್ಥರ ಪಾತ್ರ ವಹಿಸುವಂತೆ ಮಾಡಿ, ಸರದಿಯಂತೆ ಪ್ರತಿ ವರ್ಷ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಅವರು ತಿಳಿಸಿದರು.

- - -

-16ಕೆಡಿವಿಜಿ13:

ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಉದ್ಘಾಟಿಸಿದರು. ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.