ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ಮಹಿಳಾ ದೌರ್ಜನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈಗ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಗುರುವಾರ ಹೇಳಿದರು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲಕ್ಕೆ ಪ್ರವಾಸ ತೆರಳುತ್ತಿದ್ದ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣೇಗೌಡ ಮತ್ತು ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಪೊಲೀಸ್ ಠಾಣೆಗಳ ಅಧಿಕಾರಿಗಳು ತಮ್ಮ ಠಾಣೆಗಳ ವ್ಯಾಪ್ತಿಯ ಗ್ರಾಮಗಳ ಜನರನ್ನು ಒಂದೆಡೆ ಕಲೆ ಹಾಕುವ ಮೂಲಕ ಮಹಿಳೆಯರ ಮೇಲಿನ ಯಾವುದೇ ದೌರ್ಜನ್ಯಗಳ ದೂರಿನ ಪ್ರಕರಣಗಳ ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳಲಿದ್ದಾರೆ ಎಂದರು.ಮನೆಗಳಲ್ಲಿ ಕುಟುಂಬದ ಪುರುಷರು ಮಹಿಳೆಯರ ಬಗ್ಗೆ ಮನಸ್ಥಿತಿ ಬದಲಾವಣೆಯಾಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಜಾರಿಗೆ ತಂದಿರುವ ಕಾನೂನು ಕಾಯ್ದೆಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಸರ್ಕಾರ, ಕಾನೂನು ಮತ್ತು ಸಮಾಜ ಒಗ್ಗೂಡಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದರು.
ಆದಿವಾಸಿ ಮಹಿಳೆಯರಿಗೆ ಸರ್ಕಾರ ಪುನರ್ವಸತಿ ಮತ್ತು ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡುತ್ತಿದೆ. ಹೀಗಾಗಿ ಅವರು ಇರುವ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಮೂಲಕ ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಸೌಲಭ್ಯ ಕಲ್ಪಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.ಧರ್ಮಸ್ಥಳ ಸೌಜನ್ಯ ಪ್ರಕರಣವನ್ನು ಹಿಂದಿನ ಸರ್ಕಾರಗಳು ಪ್ರಕರಣದ ತನಿಖೆಗೆ ಒಳಪಡಿಸುವಲ್ಲಿ ವಿಫಲವಾಗಿದ್ದವು. ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ತಾವು ಕಳೆದ ಜುಲೈ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ನನ್ನ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಈಗ ಎಸ್ಐಟಿ ರಚನೆ ಮಾಡಿದ್ದಾರೆ. ನೊಂದ ಸಂತ್ರಸ್ತರು ನನ್ನನ್ನು ಮುಕ್ತವಾಗಿ ಭೇಟಿ ಮಾಡಬಹುದು ಎಂದರು.
ಈ ವೇಳೆ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ರಾಜಣ್ಣ, ಛತ್ರ ದ ಹೊಸಹಳ್ಳಿಯ ಸಂದೀಪ್, ಕಿರಣ್, ರವಿ, ಮರಿ ಕಾಳೇಗೌಡ, ರೂಪ ಪವಿತ್ರ ಇದ್ದರು.