ಅರೇಹಳ್ಳಿಯಲ್ಲಿ ಮನೆಮನೆಗೆ ಪೊಲೀಸ್‌ ಯೋಜನೆಗೆ ಚಾಲನೆ

| Published : Jul 22 2025, 12:15 AM IST

ಸಾರಾಂಶ

ಮುಂದಿನ ದಿನಗಳಲ್ಲಿ ಮನೆ ಮನೆಗೆ ಪೊಲೀಸರು ಬಂದಾಗ ಪೊಲೀಸ್ ಇಲಾಖೆ ವ್ಯಾಪ್ತಿಗೊಳಪಡುವ ಯಾವುದೇ ಸಮಸ್ಯೆಗಳಿದ್ದರೂ ಆತಂಕ ಬಿಟ್ಟು ನಿರ್ಭಯವಾಗಿ ತಿಳಿಸಿ. ಅದರಿಂದ ನಿಮ್ಮ ಸಮಸ್ಯೆಗಳು ಸಾಧ್ಯವಾದಷ್ಟು ಮನೆಯಲ್ಲಿಯೇ ಬಗೆಹರಿಯುತ್ತದೆ. ಅಲ್ಲದೆ ಪೊಲೀಸರ ಹಾಗು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯೊಂದಿಗೆ ಜನಸ್ನೇಹಿ ಪೊಲೀಸರಾಗಲು ಅವಕಾಶ ದೊರಕುತ್ತದೆ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಇದು ಸಹಕಾರಿಯಾಗುತ್ತದೆ ಎಂದರು. ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದ್ದು ಈ ಹಿನ್ನೆಲೆಯಲ್ಲಿ ಅರೇಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಜನಸ್ನೇಹಿ ಆಡಳಿತ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರದ ಗೃಹ ಇಲಾಖೆಯು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದ್ದು ಈ ಹಿನ್ನೆಲೆಯಲ್ಲಿ ಅರೇಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶೋಭ ಭರಮಣ್ಣ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳನ್ನು ಮನೆ ಮನೆಗೆ ತೆರಳಿ ಆಲಿಸಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಆದೇಶ ನೀಡಿದೆ. ಸರ್ಕಾರವು ಇಂತಹ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಯೋಜನೆಯು ಪರಿಪೂರ್ಣವಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮುಂದಿನ ದಿನಗಳಲ್ಲಿ ಮನೆ ಮನೆಗೆ ಪೊಲೀಸರು ಬಂದಾಗ ಪೊಲೀಸ್ ಇಲಾಖೆ ವ್ಯಾಪ್ತಿಗೊಳಪಡುವ ಯಾವುದೇ ಸಮಸ್ಯೆಗಳಿದ್ದರೂ ಆತಂಕ ಬಿಟ್ಟು ನಿರ್ಭಯವಾಗಿ ತಿಳಿಸಿ. ಅದರಿಂದ ನಿಮ್ಮ ಸಮಸ್ಯೆಗಳು ಸಾಧ್ಯವಾದಷ್ಟು ಮನೆಯಲ್ಲಿಯೇ ಬಗೆಹರಿಯುತ್ತದೆ. ಅಲ್ಲದೆ ಪೊಲೀಸರ ಹಾಗು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯೊಂದಿಗೆ ಜನಸ್ನೇಹಿ ಪೊಲೀಸರಾಗಲು ಅವಕಾಶ ದೊರಕುತ್ತದೆ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಇದು ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ಸಹಾಯಕ ಪೊಲೀಸ್ ಸಬ್ಇನ್ಸ್‌ಪೆಕ್ಟರ್‌ ಮಂಜುನಾಥ್, ಸಿಬ್ಬಂದಿಯಾದ ಅಶೋಕ್, ಪೃಥ್ವಿ, ಅವಿನಾಶ್, ದರ್ಶನ್, ಪುಟ್ಟಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.