ಸಾರಾಂಶ
ರಟ್ಟೀಹಳ್ಳಿ: ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಲಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಅವರಲ್ಲಿರುವ ಸಮಸ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯ ಪೇದೆ ಸುರೇಶ ಅಂಗಡಿ ಹೇಳಿದರು. ಪಟ್ಟಣದಲ್ಲಿ ನಡೆದ ಮನೆ ಮನೆ ಪೊಲೀಸ್ ಕಾರ್ಯಕ್ರಮದ ಅಡಿಯಲ್ಲಿ ಮನೆಗಳ ಭೇಟಿ ನೀಡಿ ಮಾತನಾಡಿದ ಅವರು. ಪ್ರಸ್ತುತ ರಾಜ್ಯದಲ್ಲಿ ಕೊಲೆ, ಸುಲಿಗೆ, ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಹಾಗೂ ಅವರ ಭದ್ರತೆಗಾಗಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿ ಕುಟುಂಬದ ಮಾಹಿತಿ ಕುಂದು ಕೊರತೆಗಳ ಬಗ್ಗೆ ಮುಕ್ತ ಸಮಾಲೋಚನೆ ಮಾಡುತ್ತಿದ್ದು ಸಾರ್ವಜನಿರು ತಮ್ಮ ಅಹವಾಲುಗಳನ್ನು ಮುಕ್ತವಾಗಿ ತಿಳಿಸಬಹುದು ಎಂದರು.ಮನೆ ಮನೆ ಭೇಟಿ ಯೋಜನೆಯಡಿ 50-50 ಮನೆಗಳ ಒಂದು ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್ ಅಧಿಕಾರಿಗಳಿಗೆ ಆಯಾ ಸಮೂಹದ ಜವಾಬ್ದಾರಿ ನೀಡಿ ಆ ಮೂಲಕ ಅವರ ಕಾನೂನಿನ ಕುಂದು ಕೊರತೆಗಳನ್ನು ಆಲಿಸಿ ಸಾರ್ವಜನಿಕರೊಂದಿಗೆ ಇಲಾಖೆಯ ಉತ್ತಮ ಬಾಂಧವ್ಯ ವೃದ್ಧಿಸುವಲ್ಲಿ ಈ ಯೋಜನೆ ಸದುಪಯೋಗವಾಗುವುದು ಆದ್ದರಿಂದ ಮನೆಗಳಿಗೆ ಭೇಟಿ ನೀಡುವ ಪೊಲೀಸ್ ಅಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಾಜದಲ್ಲಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು. ಸ್ಥಳೀಯವಾಗಿ ನಡೆಯುವ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ, ಅಸ್ಪೃಶ್ಯತೆ, ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಹಾಗೂ ರೌಡಿಗಳ ಉಪಟಳ, ಕೋಮು ವೈಷಮ್ಯಗಳ ಬಗ್ಗೆ ಜಾತಿ ಜಾತಿಗಳಲ್ಲಿನ ಕಲಹದ ಗಂಭೀರತೆಯ ಬಗ್ಗೆ ನಿಗಾವಹಿಸಿ ತಮ್ಮಿಂದಾಗದ ಕೆಲಸಗಳಿಗೆ ವಿನಾಕಾರಣ ತಲೆ ಹಾಕದೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತ ಕಿಡಿಗೆಡಿಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲಾಗುವುದು ಎಂದು ರವಿ ಅರಲಗೇರಿ ಮನವಿ ಮಾಡಿದರು.