ಮನೆ-ಮನೆಯ ನಿತ್ಯದ ಅತಿಥಿ ಪತ್ರಿಕಾ ವಿತರಕರು

| Published : Sep 04 2024, 01:47 AM IST

ಸಾರಾಂಶ

ರಾಜ್ಯದಲ್ಲಿ ''ಕನ್ನಡಪ್ರಭ'' ಸೇರಿದಂತೆ ಕನ್ನಡ, ಇಂಗ್ಲಿಷ್‌, ಮರಾಠಿ, ಉರ್ದು, ರಾಜಸ್ಥಾನಿ ಪತ್ರಿಕೆ ಹೀಗೆ ಯಾವುದೇ ಇರಲಿ. ಅವುಗಳನ್ನು ಓದುಗರ ಮನೆ ಮನೆಗೆ ತಲುಪಿಸುವಲ್ಲಿ 40 ಸಾವಿರಕ್ಕೂ ಅಧಿಕ ವಿತರಕರು ತೊಡಗಿಕೊಂಡಿದ್ದಾರೆ.

ಶಿವಾನಂದ ಅಂಗಡಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇವರಿಗೆ ಸಂಬಳವೂ ಇಲ್ಲ, ರಜಾನೂ ಇಲ್ಲ. ಕಮಿಶನ್‌ ಮೇಲೆಯೇ ಜೀವನ... ರಾಜ್ಯದ ಮನೆ-ಮನೆಗೂ ಪತ್ರಿಕೆ ಹಂಚುವ ಮೂಲಕ ನಿತ್ಯದ ಅತಿಥಿಗಳಾಗಿದ್ದಾರೆ ಸಹಸ್ರಾರು ಪತ್ರಿಕಾ ವಿತರಕರು.

ಮಳೆ ಇರಲಿ, ಚಳಿ ಇರಲಿ, ಇಲ್ಲವೇ ಮನೆಯಲ್ಲೇ ಕುಟುಂಬ ಸದಸ್ಯರು ಆರಾಮ ತಪ್ಪಿರಲಿ ಇಲ್ಲವೇ ಮೃತಪಟ್ಟಿರಲಿ. ಬೆಳ್ಳಂಬೆಳಗ್ಗೆ ಮನೆ ಮನೆಗೆ ಪ್ರತಿದಿನ ದಿನಪತ್ರಿಕೆಗಳ ತಲುಪಿಸುವ ಕೆಲಸವನ್ನು ಇವರು ಮಾಡಲೇಬೇಕು. ಇದು ಬೇರೆ ಬೇರೆ ವೃತ್ತಿಯಲ್ಲಿರುವವರೆಗೆ ಗೊತ್ತಾಗುವುದೇ ಇಲ್ಲ.

ರಾಜ್ಯದಲ್ಲಿ ''''ಕನ್ನಡಪ್ರಭ'''' ಸೇರಿದಂತೆ ಕನ್ನಡ, ಇಂಗ್ಲಿಷ್‌, ಮರಾಠಿ, ಉರ್ದು, ರಾಜಸ್ಥಾನಿ ಪತ್ರಿಕೆ ಹೀಗೆ ಯಾವುದೇ ಇರಲಿ. ಅವುಗಳನ್ನು ಓದುಗರ ಮನೆ ಮನೆಗೆ ತಲುಪಿಸುವಲ್ಲಿ 40 ಸಾವಿರಕ್ಕೂ ಅಧಿಕ ವಿತರಕರು ತೊಡಗಿಕೊಂಡಿದ್ದಾರೆ. ಈ ಅಂಕಿ ಸಂಖ್ಯೆಗಳು ಒಂದು ಕ್ಷಣ ಅಚ್ಚರಿ ಮೂಡಿಸುತ್ತವೆ. ಇದಕ್ಕಿಂತ ಮಿಗಿಲಾಗಿ 70 ವರ್ಷ ಮೇಲ್ಪಟ್ಟವರೇ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಕದಲ್ಲಿ ತೊಡಗಿರುವುದು ವಿಶೇಷ.

ಪತ್ರಿಕೆ ಹಂಚುವುದು ಸಾಮಾನ್ಯ ಕೆಲಸವಲ್ಲ. ರಾತ್ರಿ ಎಷ್ಟೇ ಲೇಟಾಗಿ ಮಲಗಿದರೂ ಬೆಳಗ್ಗೆ 4.30 ಗಂಟೆಗೆ ಪತ್ರಿಕೆ ಇಳಿಸುವ ಜಾಗದಲ್ಲಿ ಅವರು ಇರಲೇ ಬೇಕು. ಹುಬ್ಬಳ್ಳಿಯಲ್ಲೇ ಪತ್ರಿಕೆಗಳನ್ನು ಇಳಿಸುವ ಇಂಥ ಐದು ಸ್ಥಳಗಳಿವೆ. ಹುಬ್ಬಳ್ಳಿ-ಧಾರವಾಡದಲ್ಲಿ 350ಕ್ಕೂ ಅಧಿಕ ಜನರು ಪತ್ರಿಕೆ ವಿತರಕರಿದ್ದು, ತಾವು ವಿತರಿಸುವ ಪತ್ರಿಕೆಗಳ ಬಂಡಲ್‌ಗಳನ್ನು ಬಿಚ್ಚಿ ಆಯಾ ವಾರ್ಡ್‌ಗಳಲ್ಲಿ ಪ್ರಸರಣ ಸಂಖ್ಯೆಗೆ ಅನುಗುಣವಾಗಿ ಪುನಃ ಸಿದ್ಧಗೊಳಿಸುವ ಕೆಲಸವನ್ನು ಮೇನ್‌ ಏಜೆಂಟ್‌ ಮಾಡುತ್ತಾರೆ.

ಹೀಗೆ ಸಿದ್ಧಗೊಂಡ ಪತ್ರಿಕೆಗಳು ಬಿಡಿ ಬಿಡಿಯಾಗಿ ವಿತರಕರ ಮೂಲಕ ಆಯಾ ಗ್ರಾಹಕರ ಮನೆ ಮನೆಗೆ ತಲುಪುತ್ತವೆ. ಕೊರೋನಾ ಅಬ್ಬರದ ವೇಳೆಯೇ ಮಾರಕ ಕಾಯಿಲೆ ತಗುಲಿ ರಾಜ್ಯದಲ್ಲಿಯೇ 200 ಅಧಿಕ ಪತ್ರಿಕೆ ವಿತರಕರು ಮೃತಪಟ್ಟಿದ್ದಾರೆ. ಸಂಸತ್‌ ಸದಸ್ಯರಿಂದಾಗಲಿ, ಶಾಸಕರು ಇಲ್ಲವೇ ಆಳುವ ಸರ್ಕಾರಗಳಿಂದಾಗಲೇ ಯಾವುದೇ ಪರಿಹಾರವೇ ಸಿಕ್ಕಿಲ್ಲ ಎಂದು ನೊಂದು ನುಡಿಯುತ್ತಾರೆ ಧಾರವಾಡ ಶಹರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಿವು ಹಲಗಿ ಹಾಗೂ ಹುಬ್ಬಳ್ಳಿ ಪತ್ರಿಕಾ ವಿತರಕರ ಒಕ್ಕೂಟ ಸಂಘಟನೆ ಅಧ್ಯಕ್ಷ ಮನೋಹರ ಪರ್ವತಿಕರ.

2020ರಲ್ಲಿ ಸಂಘಟನೆ ಆರಂಭ:

ಪತ್ರಿಕೆ ವಿತರಕರ ಕೆಲಸವನ್ನು ಕೇಂದ್ರ ಸರ್ಕಾರ ಅಗತ್ಯ ಸೇವೆ ಎಂದೇ ಘೋಷಿಸಿದೆ. ಆದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಕೊರೋನಾ ವೇಳೆ ಮೃತಪಟ್ಟವರ ಕುಟುಂಬ ಸದಸ್ಯರ ಕಣ್ಣೀರು ಒರೆಸಿ ಅವರಿಗೆ ಕೈಲಾದ ಸಹಾಯಕ ಮಾಡಲೆಂದೇ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಸಂಘಟನೆ 2020ರಲ್ಲಿ ಜನ್ಮತಾಳಿದೆ.

ಒಕ್ಕೂಟ ಆರಂಭವಾದ ಮೇಲೆ ಸಣ್ಣ ಪುಟ್ಟ ಸ್ಥಳೀಯ ಸಂಘಟನೆಗಳು ನಮ್ಮ ಸಂಘಟನೆಯಲ್ಲಿ ಸೇರ್ಪಡೆಯಾಗಿವೆ. ಧಾರವಾಡ, ತುಮಕೂರು, ಚಾಮರಾಜನಗರ, ಮೈಸೂರು ಸೇರಿದಂತೆ 23 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ ಎನ್ನುತ್ತಾರೆ ರಾಜ್ಯ ಸಂಘಟನೆ ಅಧ್ಯಕ್ಷರು.

ಸಂಘ ಹುಟ್ಟಿದ ಮೇಲೆ ಕ್ಷೇಮ ನಿಧಿ ಇರಲಿಲ್ಲ. ರಾಜ್ಯ ಮಟ್ಟದ ಎರಡು ಸಮ್ಮೇಳನ ಬೆಂಗಳೂರಿನಲ್ಲಿ ಮಾಡಿದ್ದೇವೆ. ಮೂರನೇಯದ್ದು ತುಮಕೂರಲ್ಲಿ ಆಗಿದ್ದು, ನಾಲ್ಕನೇ ಸಮ್ಮೇಳನ ಸೆ. 8ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. 2018ರಲ್ಲಿ ಪತ್ರಿಕಾ ವಿತರಕರಿಗೆ ಕ್ಷೇಮ ನಿಧಿ ಸ್ಥಾಪನೆ ಮಾಡಿದ್ದು, ಅದು ಯಾವುದೇ ರೀತಿ ಉಪಯೋಗಕ್ಕೆ ಬಂದಿಲ್ಲ. ನ್ಯೂನತೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಈ ಬಾರಿ ಸಮ್ಮೇಳನದಲ್ಲಿ ₹10 ಕೋಟಿ ಬೇಡಿಕೆ ಇಟ್ಟು, ವಿತರಕರು ಆಕಾಲಿಕ ಮರಣ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಷೇಮ ನಿಧಿ ಸ್ಥಾಪಿಸಲು ಕೇಳಿಕೊಂಡಿದ್ದೇವೆ. ಬಡ್ಡಿರಹಿತ ಸಾಲದಲ್ಲಿ ಎಲೆಕ್ಟ್ರಿಕ್‌ ಬೈಕ್‌, ಬಡ್ಡಿರಹಿತ ಸಾಲದಲ್ಲಿ ನಿವೇಶನ, ಇಲ್ಲದೇ ಆಶ್ರಯ ಯೋಜನೆಯಡಿ ಮನೆ ನೀಡಬೇಕು, ಸಂಘದಲ್ಲಿ 70 ವರ್ಷ ಮೇಲ್ಪಟ್ಟ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರಿಗೂ ವಿಮೆ ಸೌಕರ್ಯ ಕಲ್ಪಿಸಬೇಕು ಎಂಬುದು ಒಕ್ಕೂಟದ ಬೇಡಿಕೆಯಾಗಿದೆ.ಕೋಟ್‌...

ಮೊದಲು ಪತ್ರಿಕಾ ವಿತರಕರ ಸ್ಥಳೀಯ ಸಂಘಟನೆಗಳು ಇದ್ದವು. ಕಾರ್ಯನಿರತ ಪತ್ರಕರ್ತರ ಸಂಘ ನಮಗೆ ಬೆನ್ನೆಲುಬಾಗಿ ನಿಂತ ಮೇಲೆ ರಾಜ್ಯ ಮಟ್ಟದ ಸಂಘಟನೆ ಮಾಡಿದ್ದೇವೆ. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಸಂಘಟನೆ ಸದಸ್ಯನಿಗೆ ₹2 ಲಕ್ಷ ಪರಿಹಾರ ಸಹ ಕೊಡಿಸಿದ್ದು, ಇನ್ನು ಹಲವಾರು ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರಿಯಲಿದೆ.

ಶಂಭುಲಿಂಗ ಕೆ., ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಸಂಘಟನೆ ಅಧ್ಯಕ್ಷಪೇಪರ್‌ ಹಂಚುವ ವೃತ್ತಿಯಿಂದ ನನ್ನ ಜೀವನ ಬದಲಾಗಿದೆ. ನಾವು ಆಸಕ್ತಿಯಿಂದ ಕೆಲಸ ಮಾಡಿ ಇಬ್ಬರ ಮಕ್ಕಳ ಮದುವೆ ಮಾಡಿದ್ದೇನೆ. ಬೆಳಗ್ಗೆ ಬೇಗ ಏಳುವುದರಿಂದ ನನ್ನ ಆರೋಗ್ಯವೂ ಸುಧಾರಿಸಿದೆ. ವೃತ್ತಿ ಮಾಡಿಕೊಂಡು ಹೋದರೆ ಜೀವನದಲ್ಲಿ ಯಾರಿಗೂ ಕೈಚಾಚುವ ಪ್ರಸಂಗ ಬರುವುದಿಲ್ಲ ಎಂಬುದನ್ನು ನಾವು ಕಲಿತಿದ್ದೇವೆ.

ಶಿವಾಜಿ ಬಸಂತರಾವ್‌ ತಡಸದ ಪತ್ರಿಕಾ ವಿತರಕರ ಸಂಘದ ಮಾಜಿ ಉಪಾಧ್ಯಕ್ಷಪೋಟೋ- ಪೇಪರ್‌

ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿ ಪೇಪರ್‌ ಹಂಚಲು ಸಿದ್ಧಗೊಳಿಸುತ್ತಿರುವ ಪತ್ರಿಕಾ ವಿತರಕರು.

ಪೋಟೋ-ಶಂಭುಲಿಂಗ

ಫೋಟೋ-ಶಿವಾಜಿ