ಸದಾ ಬಾಗಿಲು ಹಾಕಿರುವ ದೋಟಿಹಾಳ ಗ್ರಂಥಾಲಯ

| Published : Feb 06 2024, 01:30 AM IST

ಸಾರಾಂಶ

ಗ್ರಂಥಾಲಯ ನಿರ್ವಹಣೆ ಮಾಡುವ ತಾತ್ಕಾಲಿಕ ಸಿಬ್ಬಂದಿಯು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಗ್ರಂಥಾಲಯದಲ್ಲಿನ ಲಕ್ಷಾಂತರ ಮೌಲ್ಯದ ಸಾವಿರಾರು ಪುಸ್ತಕಗಳು, ಟೇಬಲ್, ಕುರ್ಚಿಗಳು, ಧೂಳು ಹಿಡಿದು ಹುಳ ಹುಪ್ಪಡಿಗಳ ಪಾಲಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಗ್ರಂಥಾಲಯವು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಓದುಗರು ಬಹುದೊಡ್ಡ ಸಮಸ್ಯೆ ಎದುರಿಸುವಂತಾಗಿದೆ.

ಗ್ರಂಥಾಲಯ ನಿರ್ವಹಣೆ ಮಾಡುವ ತಾತ್ಕಾಲಿಕ ಸಿಬ್ಬಂದಿಯು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಗ್ರಂಥಾಲಯದಲ್ಲಿನ ಲಕ್ಷಾಂತರ ಮೌಲ್ಯದ ಸಾವಿರಾರು ಪುಸ್ತಕಗಳು, ಟೇಬಲ್, ಕುರ್ಚಿಗಳು, ಧೂಳು ಹಿಡಿದು ಹುಳ ಹುಪ್ಪಡಿಗಳ ಪಾಲಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ದೋಟಿಹಾಳ ಗ್ರಾಪಂ ಗ್ರಂಥಾಲಯದ ಕಟ್ಟಡವು ಕೇಸೂರು ಗ್ರಾಪಂ ವ್ಯಾಪ್ತಿಯ ಕೇಸೂರು ಗ್ರಾಮದಲ್ಲಿ ಬರುತ್ತದೆ. ಕೂಡಲೇ ದೋಟಿಹಾಳ ಗ್ರಾಪಂ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರ ಮಾಡಿಕೊಂಡರೆ ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ. ವೈನ್ ಶಾಪ್ ಇರುವ ಕಾರಣ ವಿದ್ಯಾರ್ಥಿನಿಯರು ಓದಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಿವಾಸಿಗಳು ದೂರದರು.

ಚೀಲದಲ್ಲಿ ಪುಸ್ತಕಗಳು:

ಸುಮಾರು ಐದಾರು ವರ್ಷಗಳಿಂದ ಸಮರ್ಪಕ ಗ್ರಂಥಾಲಯ ಮೇಲ್ವಿಚಾರಕರು ನೇಮಕಾತಿಯಾಗದ ಹಿನ್ನೆಲೆಯಲ್ಲಿ ಮೊದಲು ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಮೃತಪಟ್ಟ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದು, ಸರಿಯಾಗಿ ನಿರ್ವಹಿಸದ ಕಾರಣ ಸಾವಿರಾರು ಪುಸ್ತಕಗಳು ಚೀಲದಲ್ಲಿ ಕೊಳೆಯುತ್ತಿವೆ.

ದೋಟಿಹಾಳ ಗ್ರಾಮದ ಗ್ರಂಥಾಲಯವನ್ನು ಸಮರ್ಪಕವಾಗಿ ತೆರೆಯುವ ಮೂಲಕ ಗ್ರಂಥಾಲಯದಲ್ಲಿನ ಸಾವಿರಾರು ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಕೊಡುವ ಮೂಲಕ ಮಾದರಿಯ ಗ್ರಂಥಾಲಯವನ್ನಾಗಿ ಮಾಡಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಸ್ಥಳಾಂತರ:ಈಗಿರುವ ಗ್ರಂಥಾಲಯ ಕಟ್ಟಡವು ಕೇಸೂರು ಗ್ರಾಪಂ ವ್ಯಾಪ್ತಿಯಲ್ಲಿದ್ದು, ವಾರದೊಳಗೆ ನಮ್ಮ ಗ್ರಾಪಂ ವ್ಯಾಪ್ತಿಯ ಕಟ್ಟಡಕ್ಕೆ ಸ್ಥಳಾಂತರ ಮಾಡಿಕೊಂಡು ಗ್ರಂಥಾಲಯ ಆರಂಭ ಮಾಡಲಾಗುತ್ತದೆ ಎನ್ನುತ್ತಾರೆ ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ.

ಗ್ರಂಥಾಲಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಮಗೆ ಬೇಕಾದಾಗ ತೆಗೆಯುವುದು, ಇಲ್ಲವಾದರೆ ಬಾಗಿಲು ಹಾಕಿಕೊಂಡು ಹೋಗುವುದು ಮಾಡುತ್ತಾರೆ. ನಮಗೆ ಓದಲು ಪತ್ರಿಕೆಗಳು ಇಲ್ಲ. ಪುಸ್ತಕಗಳು ಬಹುತೇಕ ಹಾಳಾಗಿವೆ. ಗ್ರಾಪಂನವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎನ್ನುತ್ತಾರೆ ಕರವೇ ಅಧ್ಯಕ್ಷ ಜಾವೇದ್ ಕಾಟೆವಾಡಿ.

ಗ್ರಂಥಾಲಯಕ್ಕೆ ಮೇಲ್ವಿಚಾರಕರ ನೇಮಕಾತಿಯನ್ನು ಸರ್ಕಾರ ಮಾಡಬೇಕಾಗಿದೆ. ಈಗಿರುವ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ತಾತ್ಕಾಲಿಕವಾಗಿ ಒಬ್ಬರನ್ನು ನೇಮಕ ಮಾಡಿಕೊಂಡು ಗ್ರಂಥಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ದೋಟಿಹಾಳ ಪಿಡಿಒ ಮುತ್ತಣ್ಣ ಛಲವಾದಿ.