ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಎಲ್ಲಿ ನೋಡಿದರಲ್ಲಿ ಭಕ್ತರ ದಂಡು, ಕೊರಳಲ್ಲಿ ಕೇಸರಿ ಶಾಲು, ಕೈಯಲ್ಲಿ ಕೇಸರಿ ಧ್ವಜ, ಓಂ ನಮಃ ಶಿವಾಯ, ಉಘೇ ಉಘೇ ಮಲ್ಲಯ್ಯ ಎಂಬ ಜಯಘೋಷಗಳ ಮಂತ್ರ ಪಠಣ, ಪಾದಯಾತ್ರಿ ಸೇವೆ ಮಾಡುವುದೇ ಒಂದು ಭಾಗ್ಯವೆಂದು ರಸ್ತೆಯುದ್ದಕ್ಕೂ ಉಪಾಹಾರ, ಹಣ್ಣು ಹಂಪಲು ನೀಡುತ್ತಿರುವ ಭಕ್ತವೃಂದ.

ಹೌದು. ಈ ದೃಶ್ಯಗಳು ಕಂಡು ಬಂದಿದ್ದು ತಾಲೂಕಿನ ದೋಟಿಹಾಳ, ಕೇಸೂರು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿ ಯುಗಾದಿಯಂದು ಜರುಗುವ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್ಷದಂತೆ ಪಾದಯಾತ್ರೆ ಮೂಲಕ ತೆರಳುವಾಗ.

ಭಾವೈಕ್ಯತೆಯ ಪ್ರತೀಕವಾದ ದೋಟಿಹಾಳ ಗ್ರಾಮದ ಕ್ಷೇತ್ರಾಧಿಪತಿ ಶುಕಮುನಿ ತಾತನ ಮಠದಲ್ಲಿ ಭಕ್ತರು ಜಮಾಯಿಸಿ, ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ 20ನೇ ವರ್ಷದ ಪಾದಯಾತ್ರೆ ಪ್ರಾರಂಭಿಸಲಾಯಿತು.

ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲೊಂದಾದ ಯುಗಾದಿ ಹಬ್ಬದ ಸಂದರ್ಭದಲ್ಲಿ ಜರುಗುವ ಶ್ರೀಶೈಲ ಮಲ್ಲಯ್ಯನ ಜಾತ್ರೆಗೆ ದೋಟಿಹಾಳ, ಕೇಸೂರ, ಕಲಕೇರಿ, ಬಿಜಕಲ್, ಮುದೇನೂರ, ಜಾಲಿಹಾಳ, ಗೋತಗಿ ಸೇರಿದಂತೆ ವಿವಿಧ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಕೈಗೊಂಡಿರುವುದು ವಿಶೇಷವಾಗಿದೆ.


ಪಾದಯಾತ್ರೆ ಮಾರ್ಗ: ರಾಜ್ಯದ ಬಯಲು ಸೀಮೆಯ ಆನಂತರ ಆಂಧ್ರಪ್ರದೇಶದ ಗಡಿ ದಾಟಿ ಐದಾರು ದಿನ ಕಳೆದ ಆನಂತರ, ಅಲ್ಲಿಯ ಸಿದ್ದಪುರಂ ಬಳಿ ಕಡೆ ಬಾಗಿಲಿನ ವೀರಭದ್ರೇಶ್ವರ ದೇವರ ದರ್ಶನ ಪಡೆದು ಗಿರಿಯ ಬೆಟ್ಟ ಏರಬೇಕಾಗುತ್ತದೆ.

ಅಂಬಲಿಹಳ್ಳ, ಗಂಗನಹಳ್ಳಿ ಆನಂತರ ಮಲ್ಲಯ್ಯನ ಬಾವಿ ನೀರು ಕುಡಿದು ಭೀಮನಕೊಳ್ಳ ದಾಟಿ, ಕೈಲಾಸ ಬಾಗಿಲ ಸಮೀಪಕ್ಕೆ ಹೋದಾಗ ಸ್ವರ್ಗವೆ ನಮ್ಮ ಹತ್ತಿರದಲ್ಲಿದೆ ಎಂದು ಭಾಸವಾಗುತ್ತದೆ. ದಾರಿಯಲ್ಲಿ ಮುಂದೆ ಚಲಿಸಿದ ಆನಂತರ ಸಿಗುವುದೆ ಶ್ರೀಶೈಲ ಮಲ್ಲಯ್ಯನ ದೇವಸ್ಥಾನ.

ಶ್ರೀಶೈಲಮಲ್ಲಯ್ಯನ ದರ್ಶನಕ್ಕೆ ಹೊರಡುತ್ತಿರುವ ಪಾದಯಾತ್ರಿಗಳಿಗಾಗಿ ಉಪಾಹಾರ, ಹಣ್ಣು ಹಂಪಲು, ಮಜ್ಜಿಗೆ, ಶರಬತ್ತು ಸೇವೆ ಮಾಡುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸುತ್ತಿದ್ದು, ದೋಟಿಹಾಳದಿಂದ ಶ್ರೀಶೈಲ ಮಲ್ಲಯ್ಯನ ವರೆಗೂ ಪ್ರಸಾದ ಸೇವೆ ಇರುತ್ತದೆ. ಮಾರ್ಗದುದ್ದಕ್ಕೂ ಚಹಾ, ಚೂಡಾ, ಭಜ್ಜಿ, ಉಪ್ಪಿಟ್ಟು, ಅವಲಕ್ಕಿ, ಬದಾಮಿ ಹಾಲು, ಮಜ್ಜಿಗೆ, ಹಣ್ಣು-ಹಂಪಲುಗಳ ವ್ಯವಸ್ಥೆ ಮಾಡುತ್ತ ಮಲ್ಲಯ್ಯನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಸುಮಾರು 600 ಕಿಮೀ ದೂರ ಕ್ರಮಿಸುವ ಯಾತ್ರಾರ್ಥಿಗಳು ಯುಗಾದಿಯಂದು ಶ್ರೀ ಶೈಲ ಮಲ್ಲಯ್ಯನ ದರ್ಶನ ಪಡೆಯಲಿದ್ದಾರೆ ಎನ್ನುತ್ತಾರೆ ಪಾದಯಾತ್ರಿ ಶರಣಗೌಡ ಪೊಲೀಸ್‌ಪಾಟೀಲ. ಸಂಖ್ಯೆ ಹೆಚ್ಚಳ: ಶ್ರೀಶೈಲ ಮಲ್ಲಯ್ಯನಿಗೆ ಕಳೆದ 20 ವರ್ಷಗಳಿಂದ ನಮ್ಮ ಅವಳಿ ಗ್ರಾಮಗಳಾದ ದೋಟಿಹಾಳ ಹಾಗೂ ಕೇಸೂರುದಿಂದ ಪಾದಯಾತ್ರೆ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಪಾದಯಾತ್ರೆ ಮಾಡುವ ಭಕ್ತರ ಸಂಖ್ಯೆ ಹೆಚ್ಚುತ್ತಲಿದೆ ಎಂದು ಕೇಸೂರಿನ ಶ್ರೀಶೈಲ ಮಲ್ಲಯ್ಯನ ಭಕ್ತ ಮರೇಗೌಡ ಗೌಡರ ಹೇಳುತ್ತಾರೆ.

ದೋಟಿಹಾಳದಿಂದ ಶ್ರೀಶೈಲಮಲ್ಲಯ್ಯನ ವರೆಗೆ ತೆರಳುವ ಪಾದಯಾತ್ರಿ ಮಾರ್ಗದಲ್ಲಿ ನೂರಾರು ಭಕ್ತರು ಉಪಾಹಾರ, ಹಣ್ಣು-ಹಂಪಲು, ಅನ್ನ ದಾಸೋಹ ವ್ಯವಸ್ಥೆ ಮಾಡಿರುತ್ತಾರೆ. ಯಾವುದೆ ತೊಂದರೆಯಾಗದಂತೆ ಶ್ರೀಶೈಲ ಮಲ್ಲಯ್ಯನ ದರ್ಶನವಾಗಲಿದೆ ಎಂದು ದೋಟಿಹಾಳ ಶ್ರೀಶೈಲ ಮಲ್ಲಯ್ಯನ ಭಕ್ತ ಶರಣಪ್ಪ ಗೋತಗಿ ಹೇಳುತ್ತಾರೆ.